Haveri, Shcools, Building, Damaged, Story,  
ಹಾವೇರಿ

ಶಿಥಿಲಾವಸ್ಥೆಯಲ್ಲಿ 370 ಶಾಲಾ ಕೊಠಡಿ' ಹಲವು ಸರ್ಕಾರಿ ಶಾಲೆಗಳ ಕಟ್ಟಡಗಳು ಅಯೋಮಯ; ಅಪಾಯದ ಆತಂಕದಲ್ಲೇ ಮಕ್ಕಳ ಕಲಿಕೆ

ಹಾವೇರಿ: ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೇನು ಕಡಿಮೆ ಇಲ್ಲ ಎಂಬಂತೆ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಒಗ್ಗಟ್ಟಾಗಿ ಮಾದರಿ ಶಾಲೆಗಳನ್ನು ನಿರ್ಮಿಸಿದ್ದಾರೆ. ಆದರೆ, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 370ಕ್ಕೂ ಅಧಿಕ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಶಿಕ್ಷಕರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಶಿಥಿಲಾವಸ್ಥೆಗೆ ತಲುಪುವ ಶಾಲಾ ಕೊಠಡಿಗಳ ಸಂಖ್ಯೆ ಏರುತ್ತಲೇ ಇದೆ. ಹಲವು ಸರ್ಕಾರಿ ಶಾಲೆಗಳು ದಾನಿಗಳ ನೆರವಿನಿಂದ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಲ್ಲುವಂತೆ ನಿರ್ಮಾಣಗೊಂಡಿವೆ. ಆದರೆ, ಎಲ್ಲ ಶಾಲೆಗಳಿಗೆ ಅಂತಹ ಉದಾತ್ತ ಚಿಂತನೆಯುಳ್ಳ ದಾನಿಗಳು ಸಿಗುವುದು ಅಪರೂಪ. ಹಾಗಾಗಿ, ಸರ್ಕಾರದ ಅನುದಾನವನ್ನೇ ಶಬರಿಯಂತೆ ಕಾಯುವ ಪರಿಸ್ಥಿತಿ ಜಿಲ್ಲೆಯ ಸರ್ಕಾರಿ ಶಾಲೆಗಳದ್ದಾಗಿದೆ.
ಜಿಲ್ಲೆಯ 219 ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 370 ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಹಲವು ಶಾಲೆಗಳ ಕೊಠಡಿಗಳ ಗೋಡೆಗಳು ಕುಸಿದು ಬಿದ್ದಿವೆ. ಭಾರೀ ಮಳೆ, ಗಾಳಿ ವೇಳೆ ಹಂಚುಗಳು ಹಾರಿ ಹೋಗಿದ್ದು, ಹಲವು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಹಲವು ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಹೀಗೆ ಶಿಥಿಲಗೊಂಡ ಕೊಠಡಿಗಳಲ್ಲೇ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವ ಶಿಕ್ಷೆಯನ್ನು ಸರ್ಕಾರ ಕರುಣಿಸಿದೆ. ಇದು ಶಾಲಾ ಮಕ್ಕಳು ಹಾಗೂ ಪಾಲಕರ ಆತಂಕಕ್ಕೆ ಕಾರಣವಾಗಿದೆ.
ಹಾವೇರಿ ಜಿಲ್ಲೆಯಲ್ಲಿ 1,283 ಶಾಲೆಗಳಿವೆ. ಇವುಗಳಲ್ಲಿ 219 ಶಾಲೆಗಳ 370 ಕೊಠಡಿಗಳು ಶಿಥಿಲಗೊಂಡಿರುವ ಮಾಹಿತಿಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಇನ್ನೂ 2,500 ಕೊಠಡಿಗಳು ಭಾಗಶಃ ಶಿಥಿಲಗೊಂಡಿವೆ. ಹಣಕಾಸಿನ ಕೊರತೆಯಿಂದಾಗಿ ಕೊಠಡಿಗಳ ದುರಸ್ತಿ ಹಾಗೂ ಮರು ನಿರ್ಮಾಣ ಸಾಧ್ಯವಾಗುತ್ತಿಲ್ಲ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಲ್ಲಿರುವ ಯೋಜನೆಗಳನ್ನು ಬಳಸಿಕೊಂಡು ಶಾಲೆ ಕಟ್ಟಡ ದುರಸ್ತಿ ಹಾಗೂ ಮರ ನಿರ್ಮಾಣ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳು, ಹಲವು ಇಲಾಖೆಯವರನ್ನು ಸಂಪರ್ಕಿಸುತ್ತಿದ್ದಾರೆ. ಆದರೆ, ಸದ್ಯಕ್ಕೆ ಅನುದಾನ ಲಭ್ಯವಿಲ್ಲವೆಂದು ಇಲಾಖೆಯವರು ಹೇಳುತ್ತಿದ್ದಾರೆ. ಹೀಗಾಗಿ, ಜೂನ್ 1ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಕಟ್ಟಡ ದುರಸ್ತಿ ಮರೀಚಿಕೆಯಾಗಿದೆ.
ಹಾವೇರಿ, ರಾಣೆಬೆನ್ನೂರು, ಹಾನಗಲ್ಲ, ಸವಣೂರು, ಹಿರೇಕೆರೂರು, ಶಿಗ್ಗಾಂವ, ಬ್ಯಾಡಗಿ ಹಾಗೂ ರಟ್ಟೀಹಳ್ಳಿ ತಾಲೂಕಿನಲ್ಲೂ ಹಲವು ಶಾಲೆಗಳ ಕೊಠಡಿಗಳು ಶಿಥಿಲಗೊಂಡಿವೆ. ಜುಲೈ 1ರಿಂದ ಶಾಲೆ ಪ್ರಾರಂಭವಾಗಿದ್ದು, ಶಾಲೆಯ ಮಕ್ಕಳು ಆತಂಕದಲ್ಲೇ ಪಾಠ ಕೇಳುವ ಸ್ಥಿತಿಯಿದೆ. ಇನ್ನಾದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ಮಳೆಗೆ ಹೆಚ್ಚು ಹಾನಿ
ಪೂರ್ವ ಮುಂಗಾರು ಮಳೆಯಿಂಗಾಗಿ ಜಿಲ್ಲೆಯ ಹಲವು ಶಾಲೆಗಳ ಕೊಠಡಿಗಳಿಗೆ ಹಾನಿಯಾಗಿದೆ. ಶಿಗ್ಗಾಂವ ತಾಲೂಕಿನ ಶಿಡ್ಲಾಪುರದ ಸರ್ಕಾರಿ ಶಾಲೆ ಚಾವಣಿ ಇತ್ತೀಚೆಗೆ ಹಾರಿ ಹೋಗಿ, ಕಟ್ಟಡ ಶಿಥಿಲಗೊಂಡಿದೆ. ಇದೇ ರೀತಿ ಜಿಲ್ಲೆಯ ಹಲವು ಕಡೆಗಳಲ್ಲಿ ಶಾಲೆ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಮಳೆ ವೇಳೆ ಹಲವು ಕೊಠಡಿಗಳಲ್ಲಿ ನೀರು ಸೋರಿದೆ. ಇದರಿಂದ ಕಟ್ಟಡಗಳು ಮತ್ತಷ್ಟು ಹಾಳಾಗಿವೆ.
ಗ್ರಾಮೀಣ ಮಕ್ಕಳಿಗೆ ಸುರಕ್ಷತೆ ಭೀತಿ
ಹಾವೇರಿ ಜಿಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯನ್ನು ಹೊಂದಿದೆ. ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹೆಚ್ಚಾಗಿ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಶಾಲೆ ಕೊಠಡಿಗಳು ಶಿಥಿಲಗೊಂಡಿರುವುದರಿಂದ, ಗ್ರಾಮೀಣ ಮಕ್ಕಳಲ್ಲಿ ಸುರಕ್ಷತೆಯ ಪ್ರಶ್ನೆ ಮೂಡುತ್ತಿದೆ. ಶಿಥಿಲಗೊಂಡಿರುವ ಕೊಠಡಿಗಳ ಬಗ್ಗೆ ಆಯಾ ಶಾಲೆಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಉಪ ನಿರ್ದೇಶರು ವರದಿ ನೀಡುತ್ತಲಿದ್ದಾರೆ. ಆದರೆ, ದುರಸ್ತಿ ಮಾತ್ರ ಆಗುತ್ತಿಲ್ಲವೆಂಬ ನೋವು ಶಿಕ್ಷಕರಲ್ಲಿದೆ. ಇದಕ್ಕೆ ಪರಿಹಾರವಾಗಿ ಕೆಲ ಶಿಕ್ಷಕರು, ಹಳೇ ವಿದ್ಯಾರ್ಥಿಗಳ ಸಹಾಯದಿಂದ ಕೊಠಡಿ ದುರಸ್ತಿ ಮಾಡಿಸುತ್ತಿದ್ದಾರೆ. ಆದರೆ, ಬಹುತೇಕ ಕಡೆಗಳಲ್ಲಿ ಶಿಥಿಲಗೊಂಡಿರುವ ಕೊಠಡಿಗಳೇ ಕಾಣಸಿಗುತ್ತಿವೆ.
ಶೈಕ್ಷಣಿಕ ಕಾರ್ಯಕ್ಕೂ ಅಡ್ಡಿ
ಜಿಲ್ಲೆಯ ಹಲವು ಶಾಲೆಗಳಲ್ಲಿ ಒಂದು, ಎರಡು ಕೊಠಡಿಗಳು ದುರಸ್ತಿಗೆ ಒಳಗಾಗಿವೆ. ಕೆಲ ಶಾಲೆಗಳಲ್ಲಿ ನಾಲ್ಕೈದು ಕೊಠಡಿಗಳು ಶಿಥಿಲಗೊಂಡಿವೆ. ಇದು ಆಯಾ ಶಾಲೆಗಳ ಶೈಕ್ಷಣಿಕ ಕಾರ್ಯಕ್ಕೂ ಅಡ್ಡಿಯುಂಟು ಮಾಡುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಅರ್ಧಕ್ಕೆ ನಿಂತ ಕಾರ್ಯ
ಜಿಲ್ಲಾ ಕೇಂದ್ರ ಹಾವೇರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 5ರಲ್ಲಿ ಎರಡು ಕೊಠಡಿ ಶಿಥಿಲಗೊಂಡಿವೆ. ನಾಗೇಂದ್ರನಮಟ್ಟಿಯ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಕೊಠಡಿ ಶಿಥಿಲಗೊಂಡಿದೆ. ಹಾವೇರಿ ತಾಲ್ಲೂಕಿನ ಗಾಂಧಿಪುರ, ಅಗಡಿ, ಹೊಸಳ್ಳಿ, ನಾಗನೂರು, ಕುರುಬಗೊಂಡ, ಹಾವನೂರು, ಶಾಖಾರ, ಸಂಶಿ, ಕಂಚಾರಗಟ್ಟಿ, ಹಳೇರಿತ್ತಿ, ಕುಳೇನೂರು, ಕನವಳ್ಳಿ, ಕಲ್ಲಾಪುರ, ನೆಲೋಗಲ್, ನೆಗಳೂರು, ವರದಾಹಳ್ಳಿ ಶಾಲೆಗಳಲ್ಲಿಯೂ ಕೊಠಡಿಗಳು ಶಿಥಿಲಗೊಂಡಿವೆ. ಅವುಗಳನ್ನು ನೆಲಸಮ ಮಾಡಿ, ಮರು ನಿರ್ಮಾಣ ಮಾಡುವ ಕೆಲಸ ಅರ್ಧಕ್ಕೆ ನಿಂತಿದೆ.
"

ಶಾಲಾ ಕೊಠಡಿಗಳ ದುರಸ್ತಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಶಿಥಿಲಗೊಂಡ ಸರ್ಕಾರಿ ಶಾಲಾ ಕೊಠಡಿಗಳನ್ನು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸುತ್ತಿದೆ. ಯಾವ ಕೊಠಡಿ ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ? ಯಾವ ಕೊಠಡಿ ಬಳಕೆಗೆ ಯೋಗ್ಯವಾಗಿದೆ ? ಯಾವ ಕೊಠಡಿ ಬಳಕೆಗೆ ಯೋಗ್ಯವಾಗಿಲ್ಲ ? ಎಂಬಿತ್ಯಾದಿ ಅಂಶಗಳ ಕುರಿತ ವರದಿ ತಯಾರಿಸುವ ಕಾರ್ಯ ನಡೆಸಿದೆ. ವಾರದೊಳಗೆ ವರದಿ ಕೈಸೇರಲಿದೆ. ನಂತರ ವಿವಿಧ ಯೋಜನೆಗಳಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.

— ಮೋಹನ ದಂಡಿನ, ಡಿಡಿಪಿಐ


"

ಹಾವೇರಿ ತಾಲೂಕಿನಲ್ಲಿ 78 ಶಾಲೆಗಳ 168 ಕೊಠಡಿಗಳ ದುರಸ್ತಿಗೆ ಒಳಗಾಗಿರುವ ಪ್ರಾಥಮಿಕ ಮಾಹಿತಿ ಕಲೆ ಹಾಕಲಾಗಿದೆ. ಪಿಆರ್‌ಡಿ ಮಸೀಕ್ಷೆ ನಡೆದಿದ್ದು, ಅಂತಿಮ ಸಂಖ್ಯೆ ತಿಳಿಯಲಿದೆ. ಜಿಪಂ, ತಾಪಂ, ವಿಬಿಜಿ ರಾಮ್‌ಜಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಶಾಲಾ ಕೊಠಡಿಗಳ ದುರಸ್ತಿ, ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.

— ಬಿ.ಶ್ರೀನಿವಾಸ, ಕ್ಷೇತ್ರ ಶಿಕ್ಷಣಾಧಿಕಾರಿ, ಹಾವೇರಿ


ತಾಲ್ಲೂಕುವಾರು ಹಾಳಾದ ಕೊಠಡಿಗಳ ತಾತ್ಕಾಲಿಕ ಮಾಹಿತಿ
ತಾಲ್ಲೂಕು ಶಾಲೆಗಳು ಶಿಥಿಲ ಕೊಠಡಿಗಳು
ಬ್ಯಾಡಗಿ; 31 54
ಹಾನಗಲ್ 29 54
ಹಾವೇರಿ 23 41
ಹಿರೇಕೆರೂರು 33 60
ರಾಣೆಬೆನ್ನೂರು 32 41
ಸವಣೂರು 39 69
ಶಿಗ್ಗಾಂವ 32 51