ಹಾವೇರಿ: ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಶೇ.30ರಷ್ಟು ಹಣ ಮೀಸಲು ಇಡಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಶನಿವಾರ ನಗರದ ಶಾಸಕ ರುದ್ರಪ್ಪ ಲಮಾಣಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಶಾಸಕರ ಆಪ್ತ ಸಹಾಯಕರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಾರ್ಚ್ 6ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಶಿಕ್ಷಣತಜ್ಞ ಕೊಠಾರಿ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕನಿಷ್ಠ 30ರಷ್ಟು ಹಣ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೂ ಸಹ ಎಲ್ಲ ಸರ್ಕಾರಗಳು ಬಜೆಟ್‌ನಲ್ಲಿ ಸುಮಾರು 11ರಷ್ಟು ಹಣ ಮಾತ್ರ ಮೀಸಲು ಇಡುತ್ತಿರುವುದು ಖಂಡನೀಯ ಎಂದರು.
ದೇಶದಲ್ಲಿ ಉತ್ತಮ ಗುಣಮಟ್ಟದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಕೇರಳ ರಾಜ್ಯ 27ರಷ್ಟು ಹಣ ನೀಡುತ್ತಿರುವುದು ಶ್ಲಾಘನೀಯ. ಸರ್ಕಾರಿ ಶಾಲಾ ಕಾಲೇಜ್, ಹಾಸ್ಟೆಲ್, ವಿಶ್ವ ವಿದ್ಯಾಲಗಳ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ 30ರಷ್ಟು ಹಣವನ್ನು ಈ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಆ ಮೂಲಕ ಗ್ಯಾರಂಟಿ ಪಟ್ಟಿಗೆ ಶಿಕ್ಷಣವನ್ನು ಸೇರಿಸಬೇಕು ಎಂದು ಆಗ್ರಹಿಸಿದರು.
ಶೇ.46ರಷ್ಟು ಸರ್ಕಾರಿ ಶಾಲಾ-ಕಾಲೇಜ್‌ಗಳು ಕನಿಷ್ಠ ಮೂಲ ಸೌಲಭ್ಯಗಳಿಲ್ಲದೇ ನರಳುತ್ತಿವೆ. ಶೇ.38ರಷ್ಟು ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಗೃಹಗಳು ಇಲ್ಲ. ಸರ್ಕಾರಿ ಶಾಲೆಗಳಲ್ಲಿನ ಸಾವಿರಾರು ಕೊಠಡಿಗಳಿಗೆ ದುರಸ್ತಿಯ ಅಗತ್ಯವಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಶೇ.14.6ರಷ್ಟು ಪ್ರೌಢಶಾಲೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನು ತಪ್ಪಿಸಲು ಜಾರಿಯಾದ ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆ) ಸರಿಯಾಗಿ ಜಾರಿಯಾಗುತ್ತಿಲ್ಲ. ಮನಸೋ ಇಚ್ಛೆ ಹಣ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲು ಸರ್ಕಾರ ಮುಂದಾಗಬೇಕಿದೆ ಎಂದರು.
ಉನ್ನತ ಶಿಕ್ಷಣ ಓದುತ್ತಿದ್ದ 37 ಲಕ್ಷ ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ. ಶೇ.46ರಷ್ಟು ಸರ್ಕಾರಿ ಪದವಿ ಕಾಲೇಜ್‌ಗಳು ಉಪನ್ಯಾಸಕರ ಕೊರತೆ ಎದುರಿಸುತ್ತಿವೆ. ಪರೀಕ್ಷೆ ವಿಧಾನ, ಅಂಕಪಟ್ಟಿ ದೋಷದಿಂದ 51 ಲಕ್ಷ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆ ಬಾಕಿ ಇದೆ. ಶುಲ್ಕ ಏರಿಕೆ ಸೆಮಿಸ್ಟರ್ ಪದ್ಧತಿಯ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಭಾದಿಸುತ್ತಿವೆ. ಎಲ್ಲ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಅರುಣ ನಾಗಾವತ, ಭರತ ಮಡಿವಾಳ, ತನ್ಮಯಿ ನಾಯ್ಕ, ಐಶ್ವರ್ಯ ಎಸ್., ರಿಹಾನ್ ಪಿ., ನಿಶಾ ಎ., ಮಾಳವ್ವ, ದೀಪಾ, ಸಾವಿತ್ರಿ ಕೆ., ಸೌಮ್ಯ ಎಂ.ಕೆ., ನಾಗಮ್ಮ ವಿ., ದೀಪಾ ವಡ್ಡರ, ಮಹೇಶ ಕೊಂಡಜ್ಜಿ, ಪ್ರಭುಗೌಡ ಮಲ್ಹಾರ, ಮಲ್ಲಿಕಾರ್ಜುನ ಕೆ.ಪಿ., ಮನೋಜ ಗಡ್ಡಿ, ನಂಜುಂಡ ಬಳಿಗಾರ, ಸಿದ್ದಪ್ಪ ಪೂಜಾರ, ಸುದೀಪ ಗಾಲಿ, ಇತರರಿದ್ದರು.
ಸರ್ಕಾರಿ ಕಾಲೇಜ್, ವಿವಿಗಳಿಗೆ ಅನುದಾನ ಘೋಷಿಸಿ
ಸರ್ಕಾರಿ ಇಂಜಿನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ನರ್ಸಿಂಗ್, ಹಾವೇರಿ ವಿಶ್ವವಿದ್ಯಾಲಯ, ಶಿಗ್ಗಾಂವಿ ಜಾನಪದ ವಿವಿ, ಹನುಮನಮಟ್ಟಿ ಕೃಷಿ ವಿವಿಗಳು ಸೇರಿದಂತೆ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು. ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಸರ್ಕಾರಿ ಕಾನೂನು ವಿದ್ಯಾಲಯ ಶೀಘ್ರವಾಗಿ 3 ಮತ್ತು 5 ವರ್ಷಗಳ ಕೋರ್ಸ್‌ಗಳನ್ನು ಗಳನ್ನು ಪ್ರಾರಂಭಿಸಬೇಕು. ಜಿಲ್ಲೆಯ ಪ್ರತಿ ತಾಲೂಕಿಗೊಂದು ಸರ್ಕಾರಿ ನರ್ಸಿಂಗ್, ಪ್ಯಾರಾ ಮೆಡಿಕಲ್, ಬಿ ಫಾರ್ಮ್ ಸೇರಿದಂತೆ ವಿವಿಧ ಕೋರ್ಸ್‌ಗಳ ಕಾಲೇಜ್‌ಗಳು, ಸರ್ಕಾರಿ ಡಿಪ್ಲೊಮಾ ಕಾಲೇಜ್, ಸರ್ಕಾರಿ ಬಿಎಡ್, ಡಿಎಡ್ ಕಾಲೇಜ್ಗಳನ್ನು ಹಾಗೂ ಪ್ರತ್ಯೇಕ ವೃತ್ತಿಪರ ಸೇರಿದಂತೆ ಕನಿಷ್ಟ 10 ಹಾಸ್ಟೆಲ್ಗಳನ್ನು ಮಂಜೂರು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.