Haveri, Serveyers, Protest, More Than, 14000, Servey, Pending,  
ಹಾವೇರಿ

ಸರ್ವೇಗೆ 14,000 ಅರ್ಜಿ ಬಾಕಿ; ಜಿಲ್ಲೆಯಲ್ಲಿ ಮುಂದುವರಿದ 162 ಲೈಸನ್ಸ್‌ದಾರ ಭೂಮಾಪಕರ ಮುಷ್ಕರ; ಮುಂಗಾರು ವೇಳೆ ರೈತರಿಗೆ ಸಂಕಷ್ಟ

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಕಳೆದ ಮೂರು ತಿಂಗಳಿನಿಂದ ಸರ್ಕಾರಿ ಪರವಾನಗಿ ಹೊಂದಿದ ಭೂಮಾಪಕರ ಸಂಘದಿಂದ ಮುಷ್ಕರ ಹಮ್ಮಿಕೊಂಡಿರುವ ಪರಿಣಾಮ ಜಿಲ್ಲೆಯಲ್ಲಿ 14,000ಕ್ಕೂ ಅಧಿಕ ಅರ್ಜಿಗಳ ಸರ್ವೇ ಬಾಕಿ ಉಳಿದುಕೊಂಡಿವೆ. ಇದರಿಂದ ಮುಂಗಾರು ಹಂಗಾಮಿನಲ್ಲಿರುವ ರೈತರು ಸೇರಿದಂತೆ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ.
ಪರವಾನಗಿ ಹೊಂದಿದ ಭೂಮಾಪಕರನ್ನು ಸರ್ಕಾರಿ ಸರ್ವೇಯರ್ ಎಂದು ನೇಮಿಸುವುದು, ಸೂಕ್ತ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಫೆ.26ರಿಂದ ಲೈಸನ್ಸ್ ಹೊಂದಿದ ಸರ್ವೇಯರ್‌ಗಳು ಪ್ರತಿಭಟನೆ ಆರಂಭಿಸಿದ್ದಾರೆ. ಜಿಲ್ಲೆಯ ಲೈಸನ್ಸ್ ಹೊಂದಿರುವ ಭೂಮಾಪಕರು ಸರ್ವೇ ಕಾರ್ಯ ಬಂದ್ ಮಾಡಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಇದರ ಪರಿಣಾಮ ಜಿಲ್ಲೆಯಲ್ಲಿ ಮೂರು ತಿಂಗಳಿನಿಂದ 14,000 ಸರ್ವೇ ಅರ್ಜಿಗಳು ಬಾಕಿ ಉಳಿದುಕೊಂಡಿವೆ. ತುರ್ತು ಇರುವವರು ಸಂಕಷ್ಟಕ್ಕೀಡಾಗಿದ್ದಾರೆ.
ಖಾಸಗಿ ಸರ್ವೇಯರ್‌ಗಳ ಪ್ರತಿಭಟನೆಯಿಂದಾಗಿ ಜಿಲ್ಲೆಯಲ್ಲಿನ 60ಕ್ಕೂ ಅಧಿಕ ಸರ್ಕಾರಿ ಭೂಮಾಪಕರ ಮೇಲೆ ಒತ್ತಡ ಹೆಚ್ಚಾಗಿದೆ. ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ತಯಾರಿಯಲ್ಲಿರುವ ರೈತರಿಗೆ ಖಾಸಗಿ ಭೂಮಾಪಕರ ಪ್ರತಿಭಟನೆಯ ಬಿಸಿ ತಟ್ಟಿದೆ.
ಹೊಲ, ತೋಟ, ಮನೆ, ನಿವೇಶನ, ಕೆರೆಗಳು, ಸ್ಮಶಾನ, ಗ್ರಾಮಠಾಣಾ, ಇತರೆಡೆ ಭೂಮಾಪನ ಕೆಲಸಗಳು ಆಮೆಗತಿಯಲ್ಲಿ ಸಾಗಿವೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಲೈಸನ್ಸ್ ಹೊಂದಿರುವ ಭೂಮಾಪಕರ ಬೇಡಿಕೆಗಳಿಗೆ ಸ್ಪಂದಿಸಬೇಕು. ಈ ಸಮಸ್ಯೆ ಬಗೆಹರಿಸಬೇಕು ಎಂಬ ಕೂಗು ಕೇಳಿ ಬಂದಿದೆ.
ಪ್ರತಿಭಟನಾಕಾರರ ಬೇಡಿಕೆಗಳೇನು ?
ಲೈಸನ್ಸ್‌ದಾರರಿಗೆ ಸರ್ಕಾರ ಒಂದು ಸರ್ವೇ ಅರ್ಜಿಗೆ 12,000 ರೂ. ಶುಲ್ಕ ನಿಗದಿಪಡಿಸಿದೆ. ಅದು ಅಳತೆ ಆಗಿ ಅಂತಿಮಗೊಂಡರೆ ಮಾತ್ರ. ಒಂದು ವೇಳೆ ಅರ್ಜಿ ರದ್ದಾದರೆ 250 ರೂ. ಮಾತ್ರ ಕೊಡಲಾಗುತ್ತದೆ. ತತ್ಕಾಲ ಪೋಡಿ ಮಾಡಿದರೆ ಹಣ ಬರುವುದು ಖಾತ್ರಿ ಇರುವುದಿಲ್ಲ. ಜತೆಗೆ ಖಾಸಗಿ ಸರ್ವೇಯರ್‌ಗಳ ಸಂಖ್ಯೆ ಹೆಚ್ಚಿಸಿದ್ದರಿಂದ ಕೇಸ್‌ಗಳ ಸಂಖ್ಯೆ ಕಡಿಮೆ ಆಗುತ್ತಿವೆ. ಸರ್ವೇ ಮಾಡುವಾಗ ಜಗಳ ಏರ್ಪಟ್ಟರೆ, ಸಾವು ಸಂಭವಿಸಿದರೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ಸಿಗುತ್ತಿಲ್ಲ. ಸರ್ಕಾರಿ ಸರ್ವೇಯರ್ (ಜಿಎಸ್)ಗಳಿಗೆ ಮಾಸಿಕ 40 ಸಾವಿರ ರೂ. ವೇತನ ನೀಡುತ್ತಿದ್ದು, ಅವರಿಗೆ ಸಹಾಯಕರೂ ಇರುತ್ತಾರೆ. ಖಾಸಗಿ ಸರ್ವೇಯರ್‌ಗಳಿಗೆ ಕೇವಲ 8ರಿಂದ 12 ಸಾವಿರ ರೂ. ಶುಲ್ಕ ಮಾತ್ರ ಸಿಗುತ್ತದೆ. ಸಹಾಯಕರು ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂಬುದು ಲೈಸನ್ಸ್ ಹೊಂದಿದ ಭೂಮಾಪಕರ ಆಗ್ರಹವಾಗಿದೆ.
ಸ್ವಾವಲಂಭಿ ಸ್ಕೀಮ್ ತರಲು ತಂತ್ರ
ಈ ಹಿಂದೆ ಪ್ರತಿಭಟನೆ ವೇಳೆ ಸಿಎಂ ಆಗಿದ್ದ ಸಿದ್ದರಾಮಯ್ಯ ಖಾಯಂ ಮಾಡುವುದಾಗಿ ಹೇಳಿದ್ದರು. ಪ್ರತಿಭಟನೆ ವಾಪಸ್ ಪಡೆಯಿರಿ ಮೂರು ತಿಂಗಳಲ್ಲಿ ಖಾಯಂ ಮಾಡುವುದಾಗಿ ಹೇಳಿದ್ದ ಅಧಿಕಾರಿಗಳು ಈಘ ಸ್ಪಂದಿಸುತ್ತಿಲ್ಲ. ಪ್ರತಿಭಟನಾಕಾರರನ್ನು ಬೆದರಿಸಲು ಸರ್ಕಾರ ಈಗಾಗಲೇ 300 ಲೈಸನ್ಸ್‌ದಾರರನ್ನು ಅಮಾನತು ಮಾಡಿದೆ. ಇದಕ್ಕೂ ಬಗ್ಗದೇ ಲೈಸನ್ಸ್ ಹೊಂದಿದ ಭೂಮಾಪಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಹೀಗಾಗಿ, ಖಾಸಗಿ ಏಜೆನ್ಸಿಗೆ ಲೈಸನ್ಸ್ ಹೊಂದಿದ ಭೂಮಾಪಕರ ಸೇವೆಯ ಜವಾಬ್ದಾರಿ ನೀಡುವ ಮೂಲಕ ಸ್ವಾವಲಂಬಿ ಸ್ಕೀಮ್ ಜಾರಿಗೊಳಿಸಲು ರಾಜ್ಯ ಸರ್ಕಾರ ತಂತ್ರ ರೂಪಿಸುತ್ತಿದೆ. ಇದ್ಯಾವುದಕ್ಕೂ ಆಸ್ಪದ ನೀಡುವುದಿಲ್ಲ ಎನ್ನುತ್ತಿದ್ದಾರೆ ಲೈಸನ್ಸ್ ಹೊಂದಿದ ಸರ್ವೇಯರ್‌ಗಳು.
"

ಸರ್ಕಾರಿ ಸರ್ವೇಯರ್ (ಜಿಎಸ್)ಗಳಷ್ಟೇ ಕೆಲಸವನ್ನು ನಾವೂ ಹಲವು ವರ್ಷಗಳಿಂದ ಮಾಡುತ್ತಿದ್ದೇವೆ. ಆದರೆ, ನಮಗೆ ಕನಿಷ್ಠ ವೇತನ, ಇತರ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನಾದರೂ ನಮ್ಮ ಸೇವೆ ಪರಿಗಣಿಸಿ ನೌಕರಿ ಖಾಯಂಗೊಳಿಸಬೇಕು. ಕೆಲಸಕ್ಕೆ ಸಮಾನ ವೇತನ ನಿಗಧಿಪಡಿಸಬೇಕು.

— ಬಸವರಾಜ ಯು.ಎಸ್., ಪರವಾನಗಿ ಹೊಂದಿದ ಭೂಮಾಪಕ, ರಾಣೆಬೆನ್ನೂರ


"

ಸರ್ಕಾರಿ ಪರವಾನಗಿ ಹೊಂದಿದ ಭೂಮಾಪಕರ ಪ್ರತಿಭಟನೆ ಹಿನ್ನೆಲೆ ಜಿಲ್ಲೆಯ ಎಂಟು ತಾಲೂಕುಗಳಲ್ಲಿ 14,000ಕ್ಕೂ ಅಧಿಕ ಸರ್ವೇ ಅರ್ಜಿಗಳು ಬಾಕಿ ಉಳಿದಿವೆ. ಸರ್ಕಾರಿ ಸರ್ವೇಯರ್‌ಗಳು ಹಂತ ಹಂತವಾಗಿ ಸರ್ವೇ ಕಾರ್ಯ ಮಾಡಲಿದ್ದಾರೆ. ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸಲಾಗುವುದು.

— ರೂಪಕುಮಾರ, ಉಪನಿರ್ದೇಶಕ, ಭೂಮಾಪನ ಇಲಾಖೆ


ಪರವಾನಗಿ ಪಡೆದ ಭೂಮಾಪಕರು
ತಾಲೂಕು ಲೈಸನ್ಸ್‌ದಾರರು
ಶಿಗ್ಗಾಂವ 14
ಸವಣೂರ 14
ಹಾನಗಲ್ಲ 17
ಹಾವೇರಿ 40
ಬ್ಯಾಡಗಿ 23
ಹಿರೇಕೆರೂರ 13
ರಾಣೆಬೆನ್ನೂರ 32
ರಟ್ಟೀಹಳ್ಳಿ 09
--------------------------------------------------
ಒಟ್ಟು 162