Haveri, Savitribai Pule, Teachers Association, Drawing, Compitation,
ಹಾವೇರಿ: ಪರಿಸರ ನಾಶದಿಂದ ವಿಶ್ವವೇ ನಾಶವಾಗುತ್ತಿದೆ. ಇನ್ನಾದರೂ ಪರಿಸರ ಸಂರಕ್ಷಣೆ ಮಾಡಿದ್ದರೆ ಭವಿಷ್ಯದಲ್ಲಿ ನಾವೆಲ್ಲರೂ ಬೆನ್ನ ಹಿಂದೆ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡು ಓಡಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಉಸಿರಾಡಲೂ ಹಣ ಕೊಡಬೇಕಾಗುತ್ತದೆ. ಹಾಗಾಗಿ, ಎಲ್ಲರೂ ಎಚ್ಚರಿಕೆಯಿಂದ ಪರಿಸರ ಸಂರಕ್ಷಣೆ ಕಾರ್ಯ ಆರಂಭಿಸಬೇಕಿದೆ ಎಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಗೀತಾ ಸುತ್ತಕೋಟಿ ಕರೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಹಾವೇರಿ ಹಾಗೂ ಧಾರವಾಡ ಜಿಲ್ಲಾ ಘಟಕಗಳ ವತಿಯಿಂದ ನಗರದ ಜಿಲ್ಲಾ ಗುರು ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕಿಯರ ಸಂಘಟನೆಯ ಸದುದ್ದೇಶದಿಂದ ದೇಶಾದ್ಯಂತ ನಿರ್ಮಾಣವಾಗಿರುವ ನಮ್ಮ ಸಂಘ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಅವರ ಮಾರ್ಗದರ್ಶನದಲ್ಲಿ ಪರಿಸರ ದಿನ ಆಚರಿಸುತ್ತಿದ್ದೇವೆ. ಸಂಘದ ಪದಾಧಿಕಾರಿಗಳು, ಕೆನರಾ ಬ್ಯಾಂಕ್ ಹಾಗೂ ದಾನಿಗಳ ನೆರವಿನಿಂದ ನಗದು ಬಹುಮಾನ ಹಾಗೂ ಎಲ್ಲ ಮಕ್ಕಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಕಾರ್ಯಗಳನ್ನು ಹಮ್ಮಿಕೊಳ್ಳಲು ಇದು ಪ್ರೇರಣೆ ನೀಡಿದೆ ಎಂದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಸಿದ ‘ವಿಜಯವಾಣಿ’ ಜಿಲ್ಲಾ ವರದಿಗಾರ, ಪತ್ರಕರ್ತ ಕೇಶವಮೂರ್ತಿ ವಿ. ಬೇಲೂರಪ್ಪನವರ ಮಾತನಾಡಿ, ವಿಶ್ವಸಂಸ್ಥೆ 1972ರಲ್ಲಿ ಪರಿಸರ ಸಂರಕ್ಷಣೆ ಸಲುವಾಗಿ ವಿಶ್ವ ಪರಿಸರ ದಿನಾಚರಣೆ ಆರಂಭಿಸಿದೆ. ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದೊಂದು ಸಸಿ ನೆಟ್ಟು, ಪ್ರತಿದಿನ ಅದಕ್ಕೆ ನೀರು, ಗೊಬ್ಬರ ಉಣಿಸಿ ಹೆಮ್ಮರವಾಗುವಂತೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಮುಂದಿನ ಪೀಳಿಗೆಗೆ ಕೊಡುಗೆ ನೀಡಿದಂತಾಗುತ್ತದೆ. ಹಾಗಾಗಿ, ನಾವೆಲ್ಲರೂ ಇಂದಿನಿಂದಲೇ ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ಮಾಡೋಣ ಎಂದರು.
ಜಿಲ್ಲೆಯ 6ನೇ ತರಗತಿಯಿಂದ 10ನೇ ತರಗತಿಯ 300ಕ್ಕೂ ಅಧಿಕ ಶಾಲಾ ಮಕ್ಕಳು ಭಾಗವಹಿಸಿ, ಬಣ್ಣ ಬಣ್ಣದ ಚಿತ್ರಗಳ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ಸಮಾರಂಭದ ಕೊನೆಯಲ್ಲಿ ಸ್ಥಳದಲ್ಲೇ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ 5,000 ರೂ., ದ್ವಿತೀಯ ಬಹುಮಾನ 3,000 ರೂ., ತೃತೀಯ ಬಹುಮಾನ 2,000 ರೂ. ಹಾಗೂ ಇಬ್ಬರಿಗೆ ತಲಾ 1,000 ರೂ. ಸಮಾಧಾನಕರ ನಗದು ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಕೆನರಾ ಬ್ಯಾಂಕ್‌ನ ಮುಂಬೈ ವ್ಯವಸ್ಥಾಪಕ ಬಾಬಾರಾವ್ ತುಪ್ಸಮುಂಡ್ರೆ, ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ಎಂ.ಬೇವಿನಮರದ ಹಾಗೂ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಕಾರ್ಯದರ್ಶಿ ರಾಜಶ್ರೀ ಸಜ್ಜೇಶ್ವರ ಮಾತನಾಡಿದರು.
ಸಮಾರಂಭದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾಕ್ಷಾಯಿಣಿ ವಾಲ್ಮೀಕಿ, ಕೋಶಾಧ್ಯಕ್ಷೆ ಸಿದ್ದಮ್ಮ ಎಂ., ದಾಕ್ಷಾಯಿಣಿ ವಾಲ್ಮೀಕಿ, ಪ್ರಮುಖರಾದ ಬಸವಣ್ಣಯ್ಯ ಹಿರೇಮಠ, ಸಂತೋಷ ತೋಟದ, ಈರಣ್ಣ ಬೆಳವಡಿ, ಸುನಿತಾ ಪೂಜಾರ, ಪದ್ಮಾ ಕಲ್ಲು, ಸಿದ್ದಮ್ಮ ಎಂ,ರೇಣುಕಾ ಬಸುನಾಯಕ, ಸುಮಾ ಮಣ್ಣೂರು, ಶೈಲಾ, ಜಯಶ್ರೀ, ಮಂಜುಳಾ, ಅನ್ನಪೂರ್ಣ ಚೌಹಾಣ, ಕುಸುಮಾ ಮುದಿಗೌಡರ, ಶೋಭಾ ತುಂಗಳದ, ಪ್ರತಿಭಾ ಆರ್., ಚಂಪಾ ಹುಣಸಿಕಟ್ಟಿ, ಬಸವಣ್ಣಪ್ಪ ಹಿರೇಮಠ, ಮಂಜುಳಾ ಮಕರಿ, ಸುನಂದಾ ಸಾಲಿಮಠ , ಶಂಕರ ಬಡಿಗೇರ, ಮಲ್ಲಯ್ಯ ಹಿರೇಮಠ, ಪೃಥ್ವಿರಾಜ ಬೆಟಗೇರಿ, ಮತ್ತಿತರರು ಉಪಸ್ಥಿತರಿದ್ದರು.
ಕೃಷ್ಣವೇಣಿ ಪ್ರಥಮ, ರಂಜಿತಾ ದ್ವಿತೀಯ
ಭೂ ವೀರಾಪುರದ ಎಂಎಂಡಿಆರ್‌ಎಸ್ ಶಾಲೆಯ ಕೃಷ್ಣವೇಣಿ ಮಣಿಗಾರ ಪ್ರಥಮ ಬಹುಮಾನ, ಕೂಡಲ ಸರ್ಕಾರಿ ಪ್ರೌಢಶಾಲೆಯ ರಂಜಿತಾ ಶಿವಳ್ಳಿ ದ್ವಿತೀಯ ಬಹುಮಾನ ಹಾಗೂ ಕುಡುಪಲಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಥಮ ಮಣಕೂರ ತೃತೀಯ ಬಹುಮಾನ ಪಡೆದಿದ್ದಾರೆ. ಶಿಗ್ಗಾಂವನ ಗೋಹಾರ ಫಾತಿಮಾ ಪಠಾಣ ಹಾಗೂ ವರುಣ ಬಡಿಗೇರ ಇಬ್ಬರೂ ಸಮಾಧಾನಕರ ಬಹುಮಾನ ಪಡೆದರು. ನಿರ್ಣಾಯಕರಾಗಿ ಚಿತ್ರಕಲಾ ಶಿಕ್ಷಕರಾದ ಎಂ.ಜಿ.ಹಿರೇಮಠ, ವಿ.ಬಿ.ಕುರ್ತಕೋಟಿ ಹಾಗೂ ಗಂಗಾಧರಯ್ಯ ಹಿರೇಮಠ ಭಾಗವಹಿಸಿ ತೀರ್ಪು ನೀಡಿದರು.