Haveri, Savitribai Pule, Teachers, Association, Drawing Compitation,  
ಹಾವೇರಿ

ಪರಿಸರ ದಿನದ ಅಂಗವಾಗಿ ಚಿತ್ರಕಲಾ ಸ್ಪರ್ಧೆ 28ರಂದು; ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದಿಂದ ಆಯೋಜನೆ

ಹಾವೇರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾ ಗುರು ಭವನದಲ್ಲಿ ಜೂ.28ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ವ್ಯಾಸಂಗ ಮಾಡುವ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪರಿಸರ ನಾಶದಿಂದ ಆಗುವ ಹಾನಿ ಹಾಗೂ ಪರಿಸರ ಜಾಗೃತಿ ಮೂಡಿಸುವ ಕುರಿತು ಒಂದು ಗಂಟೆಯ ಅವಧಿಯಲ್ಲಿ ಚಿತ್ರ ಬಿಡಿಸಲು ಅವಕಾಶವಿದೆ. ಕೊನೆಯಲ್ಲಿ ಸ್ಥಳದಲ್ಲೇ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
ಪ್ರಥಮ ಬಹುಮಾನ 5,000 ರೂ., ದ್ವಿತೀಯ ಬಹುಮಾನ 3,000 ರೂ., ತೃತೀಯ ಬಹುಮಾನ 2,000 ರೂ. ಹಾಗೂ ಇಬ್ಬರಿಗೆ ತಲಾ 1,000 ರೂ. ಸಮಾಧಾನಕರ ನಗದು ಬಹುಮಾನ ವಿತರಿಸಲಾಗುವುದು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಪ್ರವೇಶ ಉಚಿತವಾಗಿದ್ದು, ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಚಿತ್ರ ಬಿಡಿಸಲು ಬೇಕಾಗುವ ಡ್ರಾಯಿಂಗ್ ಶೀಟ್, ಪೆನ್ಸಿಲ್, ಬಣ್ಣ, ಸ್ಕೆಚ್ ಪೆನ್, ಇತರ ಸಾಮಗ್ರಿಗಳನ್ನು ವಿದ್ಯಾರ್ಥಿಗಳೇ ತೆಗೆದುಕೊಂಡು ಬರಬೇಕು. ಉಪಾಹಾರ ವ್ಯವಸ್ಥೆ ಇರುತ್ತದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ಗೀತಾ ಎಸ್. ಸುತ್ತಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.