ಹಾವೇರಿ: ಸವಣೂರ ಪಟ್ಟಣದಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದಡಿ ಶಿಕ್ಷಕ ಜಗದೀಶ ವಗ್ಗಣ್ಣನವರ ಅವರ ಮೇಲೆ ಹಲ್ಲೆ ನಡೆಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷೃ ಆರೋಪದಡಿ ಸವಣೂರ ಪೊಲೀಸ್ ಠಾಣೆ ಸಿಪಿಐ ದೇವಾನಂದ ಎಸ್. ಹಾಗೂ ಹೆಡ್ ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ ಓದನವರ ಅವರನ್ನು ಇಲಾಖೆ ಅಮಾನತುಗೊಳಿಸಿದೆ.
ಜಿಲ್ಲೆಯ ಸವಣೂರಿನಲ್ಲಿ ಡಿ.10ರಂದು ಶಿಕ್ಷಕನಿಗೆ ಹಿಗ್ಗಾಮುಗ್ಗ ಥಳಿಸಿ, ಚಪ್ಪಲಿ ಹಾರ ಹಾಕಿ ರಸ್ತೆ ಉದ್ದಕ್ಕೂ ಮೆರವಣಿಗೆ ಮಾಡಿ, ಠಾಣೆವರೆಗೆ ಕರೆದುಕೊಂಡು ಬಂದಿದ್ದರು. ಈ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಪ್ರಾಥಮಿಕ ಮಾಹಿತಿ ಕಲೆ ಹಾಕಿ ದಾವಣಗೆರೆ ಪೂರ್ವ ವಲಯದ ಐಜಿಪಿ ಬಿ.ಆರ್.ರವಿಕಾಂತೇಗೌಡ ಅವರಿಗೆ ವರದಿ ಸಲ್ಲಿಸಿದ್ದರು. ವರದಿ ಆಧಾರದ ಮೇಲೆ ಸವಣೂರ ಠಾಣೆಯ ಇನ್‌ಸ್ಪೆಕ್ಟರ್ ದೇವಾನಂದ ಎಸ್. ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಐಜಿಪಿ ಆದೇಶ ಹೊರಡಿಸಿದ್ದಾರೆ.
ಹೆಡ್ ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ ಓದನವರ ಅವರನ್ನು ಎಸ್‌ಪಿ ಯಶೋಧಾ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ. ಇಲಾಖಾ ವಿಚಾರಣೆಯನ್ನೂ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.