Haveri, Savanur, Kalasur, Farmers, Land, Road work,
ಹಾವೇರಿ: ಹಲವು ವರ್ಷಗಳಿಂದ ಕಾದರೂ ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಸವಣೂರ ತಾಲೂಕಿನ ಕಳಸೂರ ಗ್ರಾಮದ ಮಂಟಗಣಿ ರಸ್ತೆ ರೇಲ್ವೆ ಸೇತುವೆ ಬಳಿ ರೈತರು ಸ್ವಂತ ಹಣ ಖರ್ಚು ಮಾಡಿ ಮಣ್ಣಿನ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಮಂಟಗಣಿ ರಸ್ತೆ ರೈಲ್ವೆ ಸೇತುವ ಬಳಿ ಸುಮಾರು 180 ಎಕರೆ ಹೊಲಗಳಿಗೆ ದಾರಿ ಇಲ್ಲ. ಸುಮಾರು 50ಕ್ಕೂ ಅಧಿಕ ರೈತರು ಈ ಸ್ಥಳದಲ್ಲಿ ತಮ್ಮ ಹೊಲಗಳಿಗೆ ತೆರಳಲು ಒದ್ದಾಡುವಂತಾಗಿತ್ತು. ಮಳೆಗಾಲ ಬಂದರಂತೂ ಬರಿಗಾಲಲ್ಲಿ ಓಡಾಡುವುದೂ ಕಷ್ಟವಾಗುತ್ತಿತ್ತು. ಬೈಕ್, ಟ್ರಾೃಕ್ಟರ್‌ಗಳು ಕೆಸರಿನಲ್ಲಿ ಸಿಲುಕಿ ಮುಂದೆ ಹೋಗದಂತಾಗುತ್ತಿದ್ದವು.
ಈ ಸಮಸ್ಯೆ ಬಗೆಹರಿಸಿ ಹೊಲಕ್ಕೆ ದಾರಿ ಮಾಡಿಕೊಡಿ ಎಂದು ಗ್ರಾಮಸ್ಥರು ಸ್ಥಳೀಯ ಕಳಸೂರ ಗ್ರಾಮ ಪಂಚಾಯಿತಿ, ಸವಣೂರ ತಾಲೂಕು ಪಂಚಾಯಿತಿ, ಶಾಸಕ ರುದ್ರಪ್ಪ ಲಮಾಣಿ ಅವರ ಗಮನಕ್ಕೆ ತಂದಿದ್ದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ನರೇಗಾ ಯೋಜನೆಯಲ್ಲಿ ಚರಂಡಿ, ರಸ್ತೆ ಮಾಡುವುದಾಗಿ ಹೇಳಿದ್ದರೂ ಕೇವಲ ಕಚ್ಚಾ ಕಾಲುವೆ ಮಾಡಿ ಕೈಬಿಟ್ಟಿದ್ದರು.
ಈ ಸಮಸ್ಯೆಗೆ ಮುಕ್ತಿ ಹಾಡಲೇಬೇಕು ಎಂದು ನಿರ್ಧರಿಸಿ ರೈತರು ಎಲ್ಲರೂ ಹಣ ಸಂಗ್ರಹಿಸಿದೆವು. ಟ್ರಾೃಕ್ಟರ್‌ನಿಂದ ವರದಾ ನದಿಯಿಂದ ಮಣ್ಣು ತಂದು ಹಾಕುವ ಮೂಲಕ ಮಣ್ಣಿನ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಆಗಮಿಸಬೇಕು. ನಮ್ಮ ಸಮಸ್ಯೆ ಆಲಿಸಿ, ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ರೈತರಾದ ಬಸವರಾಜ ಜೋಗಣ್ಣನವರ, ಶ್ರೀಕಾಂತಪ್ಪ ಬನ್ನಿಕೊಪ್ಪ, ತಿರಕಪ್ಪ ಕಾಟೇನಹಳ್ಳಿ, ಪದ್ಮಣ್ಣ ಹಾವೇರಿ, ಇತರರು ಒತ್ತಾಯಿಸಿದರು.