Haveri, Santosh Lad, Labour Union, Kalebhag,
ಹಾವೇರಿ: ಹಾವೇರಿ ಜಿಲ್ಲೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ಕೊಡುಗೆ ಶೂನ್ಯವಾಗಿದೆ. ಸಚಿವರಾಗಿ ಮೂರು ವರ್ಷ ಕಳೆದರೂ ಹಾವೇರಿ ಜಿಲ್ಲೆಯ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಮುಂದಾಗಿಲ್ಲ ಎಂದು ಸಂತ ಶಿಶುನಾಳ ಷರೀಫ ರಸ್ತೆ ಮತ್ತು ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮಹಮ್ಮದ್‌ಸಾಬ್ ಕಾಲೆಭಾಗ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 1ರಂದು ಕಾರ್ಮಿಕರ ದಿನಾಚರಣೆಯನ್ನು ಜಿಲ್ಲೆಯ ಕಾರ್ಮಿಕರು ಕರಾಳ ದಿನವನ್ನಾಗಿ ಆಚರಣೆ ಮಾಡುವಂತಾಗಿದೆ. ಹೊಟ್ಟೆ ಪಾಡಿಗಾಗಿ ಕೆಲಸ ನಿರ್ವಹಿಸುವ ಶ್ರಮಿಕ ವರ್ಗದ ಕಾರ್ಮಿಕರು ನಿತ್ಯವೂ ತಮ್ಮ ಜೀವನ ನಿರ್ವಹಣೆಗೆ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದರು.
ಜಿಲ್ಲೆಯಲ್ಲಿ 1,561 ಕಾರ್ಮಿಕರ ಮದುವೆ ಪ್ರೋತ್ಸಾಹ ಧನವನ್ನು ಡಿಬಿಟಿ ಮೂಲಕ ಜಮೆ ಮಾಡುವುದನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಹಿರೇಕೆರೂರ ಶಾಸಕ ಯು.ಬಿ ಬಣಕಾರ ಬೆಳಗಾವಿ ಅವೇಶನದಲ್ಲಿ ಧ್ವನಿ ಎತ್ತಿದಾಗ ಆ ಕ್ಷೇತ್ರದ ಕೆಲ ಕಾರ್ಮಿಕರಿಗೆ ಸಹಾಯಧನ ಬಿಡುಗಡೆಯಾಗಿದ್ದು, ಉಳಿದ ತಾಲೂಕಿಗೆ ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರು. ಕೇವಲ ಪರಿಶೀಲನೆ ನಡೆಸಲಾಗುವುದು ಎನ್ನುವ ನೆಪವೊಡ್ಡಿ ಮೂರು ವರ್ಷ ಕಳೆದರು. ಇಲ್ಲಿಯವರೆಗೂ ಪರಿಶೀಲನೆಗೆ ಬಂದಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಕೂಡಲೇ ಸಚಿವರು ಜಿಲ್ಲೆಗೆ ಭೇಟಿ ನೀಡಿ ಸಂಘಟನೆಗಳು ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಆಲಿಸಬೇಕು. ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಅಧ್ಯಕ್ಷ ಕೆ.ಎನ್ ಮಕಾಂದಾರ ಇದ್ದರು.
ಜಿಲ್ಲೆಯಲ್ಲಿ 2.23 ಲಕ್ಷ ಕಾರ್ಮಿಕರ ಕಾರ್ಡ್‌ಗಳು ಇದ್ದು, ಪರಿಶೀಲನೆಗಾಗಿ 75 ಅಧಿಕಾರಿಗಳ ತಂಡ ಭೇಟಿ ನೀಡಿ ಅವೈಜ್ಞಾನಿಕವಾಗಿ ಪರಿಶೀಲನೆ ಮಾಡಿದೆ. ಆದರೆ, ನೈಜ ಕಾರ್ಮಿಕರು ಕೂಡ ಅನರ್ಹ ಕಾರ್ಮಿಕರೆಂದು ಗುರುತಿಸಿದ್ದು, ಸರ್ಕಾರಿ ಯೊಜನೆಗಳು ದೊರೆಯುತ್ತಿಲ್ಲ. 50,115 ಅರ್ಹ ಕಾರ್ಡ್‌ಗಳು ಇದ್ದು, 42 ಸಾವಿರ ಅನರ್ಹರಿದ್ದಾರೆ. ಕೇವಲ ಕಾಟಾಚಾರಕ್ಕೆ ಬಂದು ಪರಿಶೀಲನೆ ನಡೆಸಲಾಗಿದೆ ಎಂದು ಕಾಲೇಭಾಗ ದೂರಿದರು.