haveri-revenue-inspector-bribe-trap-lokayukta 
ಹಾವೇರಿ

ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕನ ಬಂಧನ; ಉತಾರ ತಿದ್ದುಪಡಿ ಮಾಡಿಕೊಡಲು 12,000 ರೂ.ಗೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ

ಹಾವೇರಿ: ವ್ಯಕ್ತಿಯೊಬ್ಬರ ಉತಾರ ದುರಸ್ತಿ ಮಾಡಿಕೊಡಲು 12,000 ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 5,000 ರೂ. ಲಂಚ ಪಡೆಯುವ ವೇಳೆ ಬ್ಯಾಡಗಿ ತಾಲೂಕು ಕಂದಾಯ ನಿರೀಕ್ಷಕ ರಾಮನಗೌಡ ಚನ್ನಬಸನಗೌಡ ದ್ಯಾಮನಗೌಡ್ರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬ್ಯಾಡಗಿ ತಾಲೂಕು ಕಾಶಂಬಿ ಗ್ರಾಮದ ನಾಗರಾಜ ಹನುಮಂತಪ್ಪ ಓಲೇಕಾರ ಸರ್ವೇ ನಂಬರ್ 13/2ರ ಕಾಲಂ 11ರಲ್ಲಿ ಹೊಸ ಷರತ್ತು ಕಡಿಮೆ ಮಾಡಿಸಿ, ಉತಾರ ತಿದ್ದುಪಡಿ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು 12,000 ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ಗುರುವಾರ ಕುಮ್ಮೂರ ಕ್ರಾಸ್ ಬಳಿ 5,000 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಟ್ರಾೃಪ್ ಮಾಡಿದ್ದಾರೆ.
ಲೋಕಾಯುಕ್ತ ಪೊಲೀಸ್ ದಾವಣಗೆರೆ ಎಸ್‌ಪಿ ಎಂ.ಎಸ್.ಕೌಲಾಪುರೆ, ಹಾವೇರಿ ಡಿವೈಎಸ್‌ಪಿ ಮಧುಸೂದನ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ವಿಶ್ವನಾಥ ಕಬ್ಬೂರಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬ್ಯಾಡಗಿ ತಹಸೀಲ್ದಾರ್ ಕಚೇರಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.