Haveri, Red Cross, Day, Sindhagi Ayurvedic, College, 
ಹಾವೇರಿ

ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ; ರೆಡ್‌ಕ್ರಾಸ್ ದಿನಾಚರಣೆಯಲ್ಲಿ ನ್ಯಾಯಾಧೀಶೆ ಶ್ರೀಶೈಲಜಾ ಎಚ್.ವಿ. ಹೇಳಿಕೆ

ಹಾವೇರಿ: ಸಂಕಷ್ಟಕರ ಹಾಗೂ ಸಂದಿಗ್ಧ ಪರಸ್ಥಿತಿಯಲ್ಲಿ ಸೇವಾ ಕಾರ್ಯ ಮಾಡುವ ಗುರಿ ಉದ್ದೇಶ ಹೊಂದಿರುವ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಎಚ್.ವಿ. ಹೇಳಿದರು.
ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದಕೀಯ ಮಹಾವಿದ್ಯಾಲಯದ ಡಾ.ತೋಂಟದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾವೇರಿ ಜಿಲ್ಲಾ ಶಾಖೆ ಹಾಗೂ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜೀನ್ ಹೆನ್ರಿ ಡ್ಯೂನಾಂಟ್‌ರವರ ಜನ್ಮದಿನ, ವಿಶ್ವ ರೆಡ್ ಕ್ರಾಸ್ ದಿನಾಚಾರಣೆ ಹಾಗೂ ವೈಆರ್‌ಸಿ ಘಟಕ ಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವೀಯ ತತ್ವದಡಿ ಯುದ್ಧ, ವಿಕೋಪ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಮತ್ತು ಆರೋಗ್ಯಕರ ಜನರ ಸೇವೆ ಮಾಡುವ ಕೆಲಸವನ್ನು ರೆಡ್‌ಕ್ರಾಸ್ ಮಾಡುತ್ತಿದೆ. ಕೋವಿಡ್, ಅತಿವೃಷ್ಟಿ ನೆರೆ ಹಾವಳಿ ಸಂದರ್ಭದಲ್ಲಿ ರೆಡ್‌ಕ್ರಾಸ್ ಸ್ವಯಂಸೇವಕರಾಗಿ ಕೆಲಸ ಮಾಡಿರುವುದನ್ನು ನೋಡಲಾಗಿದ್ದು, ವಿದ್ಯಾರ್ಥಿಗಳು ಯುವ ಜನರು ರೆಡ್‌ಕ್ರಾಸ್ ಸಂಸ್ಥೆಯ ಮೂಲಕ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕಾಗಿದೆ. ರೆಡ್‌ಕ್ರಾಸ್ ಮೂಲಕ ಆರೋಗ್ಯ ಜಾಗೃತಿ ಹಾಗೂ ಕಾನೂನು ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಲಿ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸಕ್ಕೆ ಕಾನೂನು ಅರಿವು ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ಆರೋಗ್ಯಕರ ವಾತಾವರಣ ಮೂಡಿಸುವ ಕಾರ್ಯಕ್ರಮಗಳನ್ನು ರೆಡ್‌ಕ್ರಾಸ್ ಸಂಸ್ಥೆ ಮಾಡಲಿ ಎಂದು ಹೇಳಿದರು.
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ವೈಆರ್‌ಸಿ ಘಟಕ ಉದ್ಘಾಟಿಸಿ, ವೈಆರ್‌ಸಿ ಮತ್ತು ಜೆಆರ್‌ಸಿ ಮಾರ್ಗಸೂಚಿ ಕೈಪಿಡಿ ವಿತರಿಸಿ ಮಾತನಾಡಿದರು. ಜೀನ್ ಹೆನ್ರಿ ಡ್ಯೂನಾಂಟ್ ರೆಡ್ ಕ್ರಾಸ್ ಸಂಸ್ಥೆಯನ್ನು 1863ರಲ್ಲಿ ಸ್ಥಾಪಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ವಿ.ಎಚ್.ಕೆ.ಹಿರೇಮಠ ಮಾತನಾಡಿ, ಸಮಾಜದಲ್ಲಿ ವೈದ್ಯರಾಗುವವರು ಸೇವಾ ಮನೋಭಾವನೆ ಹೊಂದಬೇಕಾಗಿದೆ. ಸಮಾಜಕ್ಕೆ ನಮ್ಮದೇಯಾದ ಸೇವೆ ಸಲ್ಲಿಸಿದರೆ ಬದುಕು ಸಾರ್ಥಕವಾಗಲಿದೆ ಎಂದು ಹೇಳಿದರು.
ವೈಆರ್‌ಸಿ ಅಧಿಕಾರಿಗಳಾದ ಡಾ.ಸಂಗಮೇಶ ದೊಡ್ಡಗೌಡರ, ದೇವರಾಜ ಕುಂಬಾರ, ಡಾ.ಅಶ್ವಿನಿ ಹತ್ತಿಕಾಳ, ಮತ್ತಿತರರಿಗೆ ವೈಆರ್‌ಸಿ-ಜೆಆರ್‌ಸಿ ಕೈಪಿಡಿಗಳನ್ನು ವಿತರಿಸಲಾಯಿತು. ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜ್‌ನ ಪ್ರಾಚಾರ್ಯ ಡಾ.ಸಿ.ಎನ್.ಗೌಡರ ಸ್ವಾಗತಿಸಿದರು.
ರೆಡ್‌ಕ್ರಾಸ್ ರಾಜ್ಯ ಸಮಿತಿ ಸದಸ್ಯ ರವಿ ಮೆಣಸಿನಕಾಯಿ, ಖಜಾಂಚಿ ಪ್ರಭು ಹಿಟ್ನಳ್ಳಿ, ಸಹ ಕಾರ್ಯದರ್ಶಿ ಡಾ.ಪ್ರದೀಪ ದೊಡ್ಡಗೌಡ್ರ, ಸಿದ್ದರಾಜ ಕಲಕೋಟಿ, ಎಸ್.ಸಿ.ಹಿರೇಮಠ, ಉಡಚಪ್ಪ ಮಾಳಗಿ, ವಿಜಯಕುಮಾರ ಚಿನ್ನಿಕಟ್ಟಿ, ಶಂಕರ ಮೆಹರವಾಡೆ, ಪೂರ್ಣಿಮಾ ಮಠದ, ಡಾ.ಅಂಕಿತಾ ಆನಂದ, ಡಾ.ದಯಾನಂದ ಸುತ್ತಕೋಟಿ, ಡಾ.ಜಿ.ಎಸ್.ಭಟ್, ಡಾ.ಕಲ್ಲನಗೌಡ, ಇತರರು ಉಪಸ್ಥಿತರಿದ್ದರು.
ಬ್ಲಡ್ ಬ್ಯಾಂಕ್ ಸ್ಥಾಪನೆ
ರೆಡ್‌ಕ್ರಾಸ್ ಮೂಲಕ ಸಂದಿಗ್ಧ ಸನ್ನಿವೇಶದಲ್ಲಿ ಇರುವ ಜನರಿಗೆ ಸೇವಾ ಗುಣಗಳ ಮೂಲಕ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮನುಷ್ಯ ಇರುವಾಗ ಏನಾದರೂ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಹಾವೇರಿಯಲ್ಲಿ ಬ್ಲಡ್ ಬ್ಯಾಂಕ್ ಮಾಡುವ ಗುರಿಯನ್ನು ಹೊಂದಿದ್ದು, ಇನ್ನೂ 6 ತಿಂಗಳ ಒಳಗಾಗಿ ಬ್ಲಡ್ ಬ್ಯಾಂಕ್ ಕಟ್ಟಡ ಮುಗಿಸಬೇಕಾಗಿದೆ. ಎಲ್ಲರ ಸಹಕಾರದಿಂದ ಮುನ್ನಡೆಯೋಣ. ಎಲ್ಲ ಶಾಲಾ ಕಾಲೇಜ್‌ಗಳಲ್ಲಿ ರೆಡ್‌ಕ್ರಾಸ್ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸಂಜೀವಕುಮಾರ ನೀರಲಗಿ ಹೇಳಿದರು.