Haveri, Rattihalli, Omni Accident, 5 Death,
ಹಾವೇರಿ/ ರಟ್ಟಿಹಳ್ಳಿ: ಕೊಪ್ಪಳದ ಭಾನಾಪುರ ಬಳಿ ರಸ್ತೆ ಅಪಘಾತದಲ್ಲಿ ಮಂತ್ರಾಲಯ ಪ್ರವಾಸಕ್ಕೆ ಹೊರಟಿದ್ದ ಹಾವೇರಿ ಜಿಲ್ಲೆಯ ಐವರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡು ಧಾರುಣ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ. ಹಾವೇರಿ ಹಾಗೂ ರಟ್ಟಿಹಳ್ಳಿ ತಾಲೂಕಿನ ಹಿರೇಕಬ್ಬಾರ ಗ್ರಾಮದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಾವೇರಿಯ ಲೋಕೋಪಯೋಗಿ ಇಲಾಖೆ ದ್ವಿ.ದ.ಸಹಾಯಕ ಪ್ರವೀಣ ಬಾಳಿಕಾಯಿ (46), ಅವರ ಪತ್ನಿ ಹೇಮಾವತಿ ಬಾಳಿಕಾಯಿ (40), ಪುತ್ರ ಚಿನ್ಮಯ ಬಾಳಿಕಾಯಿ (17), ಹಾವೇರಿ ಶಿವಾಜಿ ನಗರ ನಿವಾಸಿ, ಚಾಲಕ ರಮೇಶ ಬಳ್ಳಾರಿ, (50), ರಟ್ಟಿಹಳ್ಳಿ ತಾಲೂಕು ಹಿರೇಕಬ್ಬಾರ ಗ್ರಾಮದ ಹೇಮಾವತಿ ಬಾಳಿಕಾಯಿ ಸಂಬಂಧಿ ಅಮೃತಾ ಕೋಟಿಹಾಳ (40) ಮೃತಪಟ್ಟವರು. ಹಾವೇರಿಯ ಸೋನಾಲಿ ಪ್ರವೀಣ ಬಾಳಿಕಾಯಿ , ಸಮರ್ಥ ಬಾಳಿಕಾಯಿ ಹಾಗೂ ಹಿರೆಕಬ್ಬಾರದ ಪ್ರವೀಣ ಕೋಟಿಹಾಳ, ಪ್ರಣವ ಯಾದವ ಗಾಯಗೊಂಡವರು.
ಪ್ರವೀಣ ಬಾಳಿಕಾಯಿ ಕುಟುಂಬ ಹಾಗೂ ಅವರ ಸಂಬಂಧಿಕರು 9 ಜನ ಸೇರಿ ಒಮ್ನಿ ಬಾಡಿಗೆ ಪಡೆದು ಶುಕ್ರವಾರ ರಾತ್ರಿ ಕೊಪ್ಪಳ ಮಾರ್ಗವಾಗಿ ಮಂತ್ರಾಲಯದ ರಾಯರ ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಕೊಪ್ಪಳದ ಬಳಿ ಭಾನಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅಶೋಕ ಲೇಲ್ಯಾಂಡ್ ಮಿನಿ ಲಾರಿ ಡಿಕ್ಕಿ ಹೊಡೆದಿದೆ. ಅವಘಡದಲ್ಲಿ ಒಮ್ನಿಯಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಇಬ್ಬರು ಅಸುನೀಗಿದ್ದಾರೆ.
ಸಂಜೆ ಹಾವೇರಿಯ ವಿದ್ಯಾನಗರದ ಪಿಆರ್‌ಇಡಿ ಕ್ವಾರ್ಟರ್ಸ್‌ನಲ್ಲಿರುವ ಪ್ರವೀಣ ಬಾಳಿಕಾಯಿ ನಿವಾಸ ಹಾಗೂ ಹಿರೇಕಬ್ಬಾರ ಗ್ರಾಮಕ್ಕೆ ಮೃತದೇಹಗಳನ್ನು ತರಲಾಯಿತು. ಈ ವೇಳೆ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ನಾಲ್ವರು ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಮತ್ತು ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.