illegal sand mining 
ಹಾವೇರಿ

ಅಕ್ರಮ ಮರಳು ದಂಧೆ ಅವ್ಯಾಹತ; ಮೂರು ವರ್ಷದಲ್ಲಿ 184 ಪ್ರಕರಣ ದಾಖಲು; ದಂಧೆಕೋರರಿಂದ 2.27 ಕೋಟಿ ರೂ. ದಂಡ ವಸೂಲಿ

ಹಾವೇರಿ: ಜಿಲ್ಲೆಯ ಜೀವನದಿ ತುಂಗಭದ್ರಾ ನದಿ ಸೇರಿದಂತೆ ಇತರ ನದಿಗಳಲ್ಲೂ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆದಿದ್ದು, ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂ. ರಾಜಸ್ವ ದಂಧೆಕೋರರ ಪಾಲಾಗುತ್ತಿದೆ. ಜತೆಗೆ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಮರಳುಗಳ್ಳರ ಹಾವಳಿ ಹೆಚ್ಚಾಗುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ದಾಳಿ ನಡೆಸಿ, ಸುಮ್ಮನಾಗುತ್ತಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಾವೇರಿ ತಾಲೂಕುಗಳಲ್ಲಿ ಹರಿದಿರುವ ತುಂಗಭದ್ರಾ ನದಿ ತೀರದಲ್ಲಿ ಮರಳುದಂಧೆ ಅವ್ಯಾಹತವಾಗಿ ನಡೆದಿದೆ. ರಾಣೆಬೆನ್ನೂರ ತಾಲೂಕಿನ ಮುದೇನೂರ, ಚೌಡಯ್ಯದಾನಪುರ, ಪತ್ತೇಪುರ, ಕೋಟಿಹಾಳ, ಮೆಡ್ಲೇರಿ, ಬೇಲೂರು, ಹರನಗೇರಿ, ಹಿರೇಬಿದರಿ, ಕುದರಿಹಾಳ, ಅರೆಮಲ್ಲಾಪುರ ಹಾಗೂ ಹಾವೇರಿ ತಾಲೂಕು ಗುತ್ತಲ ಹೋಬಳಿಯ ಹುರಳಿಹಾಳ, ಹಾವನೂರ, ಐರಣಿ, ಗಳಗನಾಥ, ಹಾವನೂರ, ತೆರೆದಹಳ್ಳಿ, ಮೇವುಂಡಿ ಭಾಗದಲ್ಲಿ ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತದೆ.
ಅಕ್ರಮ ಮರಳ ಸಂಗ್ರಹದ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸರಿಗೆ ಬಹುತೇಕವಾಗಿ ತಿಳಿದಿರುತ್ತದೆ. ಕೆಲವೊಮ್ಮೆ ಹೆಸರಿಗೆ ಮಾತ್ರ ದಾಳಿ ಮಾಡಿ ಸುಮ್ಮನಾಗುವ ಅಧಿಕಾರಿಗಳು, ದೊಡ್ಡ ದೊಡ್ಡ ರಾಶಿಗಳನ್ನು ಬಿಟ್ಟು ಸಣ್ಣ ಪ್ರಮಾಣದ ಮರಳು ವಶಕ್ಕೆ ಪಡೆದು ಕೈತೊಳೆದುಕೊಳ್ಳುತ್ತಾರೆ. ಅಕ್ರಮ ಮರಳು ಸಂಗ್ರಹವನ್ನು ಕಣ್ಣಾರೆ ಕಂಡರೂ ಅದನ್ನು ವಶಪಡಿಸಿಕೊಳ್ಳದೇ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾರೆ ಎಂಬ ಆರೋಪಗಳಿವೆ.
ಹೀಗೆ ಕೋಟ್ಯಂತರ ರೂ. ಮೌಲ್ಯದ ನೈಸರ್ಗಿಕ ಸಂಪತ್ತು ಲೂಟಿ ಹೊಡೆಯುವ ಲೂಟಿಕೋರರ ಹೆಡೆಮುರಿ ಕಟ್ಟಬೇಕಾಗಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹೆಸರಿಗೆ ಮಾತ್ರ ಅಲ್ಲೊಂದು, ಇಲ್ಲೊಂದು, ಸಣ್ಣ ಪುಟ್ಟ ಕೇಸ್‌ಗಳನ್ನು ಮಾಡಿ ಮತ್ತೆ ದಂಧೆಕೋರರಿಗೆ ರಹದಾರಿ ಮಾಡಿಕೊಡುತ್ತಿದೆ ಎಂಬ ಆರೋಪಗಳಿವೆ.
ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ಸಂಗ್ರಹ ಹಾಗೂ ಸಾಗಣೆ ಮಾಡುವವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ 600 ಕಡೆ ದಾಳಿ ನಡೆಸಿದೆ. ಅದರಲ್ಲಿ 184 ಪ್ರಕರಣ ದಾಖಲಿಸಿಕೊಂಡು, 2.27 ಕೋಟಿ ರೂ. ದಂಡ ವಸೂಲಿ ಮಾಡಿದೆ. ದಂಧೆಗೆ ಸಂಪೂರ್ಣ ಬ್ರೇಕ್ ಹಾಕಿದರೆ ಸರ್ಕಾರಕ್ಕೆ ಇದರ ಹತ್ತು ಪಟ್ಟು ಲಾಭ ಆಗುವುದಲ್ಲದೇ, ಪರಿಸರ ಹಾನಿಯನ್ನೂ ತಪ್ಪಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ನಿಷ್ಕ್ರೀಯವಾದ ವಿಶೇಷ ತಂಡ
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಕಳೆದ ವರ್ಷ ಅಕ್ರಮ ಮರಳು ದಂಧೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಅಕ್ರಮ ಮರಳು ಗಣಿಕಾರಿಕೆ ತಡೆಯುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡ ರಚಿಸಿದ್ದರು. ಈ ತಂಡ ಆರಂಭದಲ್ಲಿ ಉತ್ತಮವಾಗಿ ಕಾರ್ಯಾಚರಣೆ ನಡೆಸಿ, ನಂತರ ನಿಷ್ಕ್ರಿಯವಾಯಿತು. ಹೀಗಾಗಿ, ದಂಧೆಕೋರರು ಮತ್ತೆ ಬಾಲ ಬಿಚ್ಚಿದ್ದಾರೆ ಎಂದು ಜಿಲ್ಲೆಯ ಜನರ ಆರೋಪವಾಗಿದೆ.
"

ಅಕ್ರಮ ಮರಳುಗಾರಿಕೆ ನಡೆಸುವ ನದಿ ತೀರದ ಸ್ಥಳಗಳು ಹಾಗೂ ಸಾಗಣೆ ವಾಹನಗಳ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಅಕ್ರಮ ನಡೆಯುತ್ತಿರುವ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ.

ದಾಖಲಾದ ಪ್ರಕರಣಗಳು
ವರ್ಷ ಅಕ್ರಮ ಗಣಿಗಾರಿಕೆ, ಸಂಗ್ರಹ, ಸಾಗಣೆ ಕೇಸ್ ದಂಡ ವಸೂಲಿ ಪ್ರಕರಣಗಳ ಸಂಖ್ಯೆ
2023-24 180 58.14 ಲಕ್ಷ 63
2024-25 282 127.48 ಲಕ್ಷ 52
2025-26 138 41.71 ಲಕ್ಷ 69
------------------------------------------------------------------------------------------------------------------
ಒಟ್ಟು 600 2.27 ಕೋಟಿ ರೂ. 184