MLA's Meets DCM  
ಹಾವೇರಿ

ಡಿಸಿಎಂ ಭೇಟಿಯಾದ ಹಾವೇರಿ ಜಿಲ್ಲೆಯ 3 ಶಾಸಕರು; ರಾಣೆಬೆನ್ನೂರಲ್ಲಿ ತಾರಕಕ್ಕೇರಿದ ಹಾಲಿ, ಮಾಜಿಗಳ ಅಹಿಂದ ಕದನ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಸದಾಶಿವನಗರದಲ್ಲಿನ ಡಿ.ಕೆ.ಶಿವಕುಮಾರ ನಿವಾಸ
  • ಜಿಲ್ಲೆಯ ಮೂವರು ಶಾಸಕರ ಭೇಟಿ
  • ಭಾರೀ ಚರ್ಚೆಗೆ ಗ್ರಾಸವಾದ ಶಾಸಕರ ಡಿಸಿಎಂ ಭೇಟಿ
ಹಾವೇರಿ: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಿಎಂ ಸೀಟಿಗಾಗಿ ಮುಸುಕಿನ ಗುದ್ದಾಟ ನಡೆದಿರುವಾಗ ಜಿಲ್ಲೆಯ ಮೂವರು ಶಾಸಕರಾದ ಶಾಸಕರಾದ ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ ಹಾಗೂ ಯಾಸೀರ್‌ಖಾನ್ ಪಠಾಣ ಡಿಸಿಎಂ ಅವರನ್ನು ಭೇಟಿಯಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಸದಾಶಿವನಗರದಲ್ಲಿನ ಡಿ.ಕೆ.ಶಿವಕುಮಾರ ನಿವಾಸಕ್ಕೆ ಶುಕ್ರವಾರ ರಾತ್ರಿ ಜಿಲ್ಲೆಯ ಶಾಸಕರಾದ ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ ಹಾಗೂ ಯಾಸೀರ್‌ಖಾನ್ ಪಠಾಣ ಮತ್ತು ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಭೇಟಿ ನೀಡಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದರು. ಸಿಎಂ ಬದಲಾವಣೆಯ ಬಿರುಗಾಳಿ ಬೀಸಿರುವ ಸಂದರ್ಭದಲ್ಲೇ ಮೂವರು ಶಾಸಕರು ಪ್ರತ್ಯೇಕವಾಗಿ ಭೇಟಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಆರು ಶಾಸಕರ ಪೈಕೆ ಯಾರು ಸಿಎಂ ಸಿದ್ದರಾಮಯ್ಯ ಬಣ ? ಯಾರು ಡಿಸಿಎಂ ಡಿ.ಕೆ.ಶಿವಕುಮಾರ ಬಣ ? ಯಾರಿಗೆ ಒಲಿಯಲಿದೆ ಸಚಿವ ಸ್ಥಾನ ? ಎಂಬ ಲೆಕ್ಕಾಚಾರ ಶುರುವಾಗಿದೆ.
ಅದರಲ್ಲೂ ರಾಣೆಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ ಅಹಿಂದ ಶಾಸಕ ಎಂದುಕೊಂಡು ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಲು ಸಂಚು ಹೂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದೇ ವಿಚಾರವಾಗಿ ಸದ್ಯ ಹಾಲಿ ಶಾಸಕ ಕೋಳಿವಾಡ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ನಡುವೆ ಕದನ ಏರ್ಪಟ್ಟಂತಿದೆ. ಇಬ್ಬರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧದ ಪೋಸ್ಟ್‌ಗಳನ್ನು ಹರಿಬಿಡುತ್ತಿದ್ದಾರೆ.