- ಜಿಲ್ಲೆಯಲ್ಲಿ ಮೂರು ವರ್ಷದಲ್ಲಿ 1,777 ಇ-ವಾಹನಗಳು ನೋಂದಣಿ
- ಇದರಲ್ಲಿ ದ್ವಿಚಕ್ರ ವಾಹನಗಳದ್ದೇ ಸಿಂಹಪಾಲು
- ರಾಣೆಬೆನ್ನೂರ ಎಆರ್‌ಟಿಒ ಕಚೇರಿಯಲ್ಲಿ ಅತಿ ಹೆಚ್ಚು ನೋಂದಣಿಯಾಗಿದೆ. ಹಾವೇರಿ ಆರ್‌ಟಿಒ ಎರಡನೇ ಸ್ಥಾನದಲ್ಲಿದೆ
ಹಾವೇರಿ: ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಹೆಚ್ಚಿನ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೂರು ವರ್ಷದಲ್ಲಿ 1,777 ಇ-ವಾಹನಗಳು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿವೆ. ಇದರಲ್ಲಿ ದ್ವಿಚಕ್ರ ವಾಹನಗಳದ್ದೇ ಸಿಂಹಪಾಲು ಇದ್ದು, ರಾಣೆಬೆನ್ನೂರ ಎಆರ್‌ಟಿಒ ಕಚೇರಿಯಲ್ಲಿ ಅತಿ ಹೆಚ್ಚು ನೋಂದಣಿಯಾಗಿದೆ. ಹಾವೇರಿ ಆರ್‌ಟಿಒ ಎರಡನೇ ಸ್ಥಾನದಲ್ಲಿದೆ.
ಇ-ವಾಹನಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿರುವ ಹಿನ್ನೆಲೆಯಲ್ಲಿ -ವಾಹನಗಳತ್ತ ಜನ ಮುಖ ಮಾಡುತ್ತಿದ್ದಾರೆ. ಹಾಗಾಗಿ, ಮೂರು ವರ್ಷಗಳಲ್ಲಿ 1,777 ಇ ವಾಹನಗಳು ನೋಂದಣಿಯಾಗಿವೆ. 2023-24ರಲ್ಲಿ ಹಾವೇರಿ ಆರ್‌ಟಿಒನಲ್ಲಿ 485 ಇವಿ ದಾಖಲಾಗಿದ್ದರೆ, ರಾಣೆಬೆನ್ನೂರಲ್ಲಿ 593 ನೋಂದಣಿಯಾಗಿವೆ. 2024-25ರಲ್ಲಿ ಹಾವೇರಿಯಲ್ಲಿ 235 ಹಾಗೂ ರಾಣೆಬೆನ್ನೂರಲ್ಲಿ 328 ನೋಂದಣಿಯಾಗಿವೆ. 2025-26ರ ನವೆಂಬರ್‌ವರೆಗೆ ಹಾವೇರಿಯಲ್ಲಿ 43 ಹಾಗೂ ರಾಣೆಬೆನ್ನೂರಲ್ಲಿ 93 ವಾಹನಗಳು ನೋಂದಣಿಯಾಗಿವೆ. ಪ್ರಸಕ್ತ ಸಾಲಿನಲ್ಲಿ ಇ-ವಾಹನಗಳ ನೋಂದಣಿ ಇಳಿಮುಖವಾಗಿದ್ದು, ಜಿಲ್ಲೆಯಲ್ಲಿ 11 ತಿಂಗಳಲ್ಲಿ ಕೇವಲ 136 ವಾಹನ ನೋಂದಣಿಯಾಗಿವೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಿಎಸ್‌ಟಿ ಸುಂಕಗಳನ್ನು ಕಡಿತಗೊಳಿಸಿದ್ದು, ವರ್ಷಾತ್ಯ ಇರುವ ಕಾರಣ ಹಲವರು ಹೊಸ ವರ್ಷಕ್ಕೆ ಇ-ವಾಹನ ಖರೀದಿಸಲು ಚಿಂತನೆ ನಡೆಸಿದ್ದಾರೆ. ಹಾಗಾಗಿ, ಈ ವರ್ಷ -ವಾಹನ ಮಾರಾಟ ಕಡಿಮೆಯಾಗಿದೆ. ಜನವರಿಯಿಂದ ಮತ್ತೆ ಹೆಚ್ಚಳವಾಗುತ್ತದೆ ಎನ್ನುತ್ತಾರೆ ಜಿಲ್ಲೆಯ ಆಟೋಮೊಬೈಲ್ ಮಾರುಕಟ್ಟೆ ತಜ್ಞರು. ಇ-ವಾಹನಗಳಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿದ್ದು ಕಡಿಮೆ ಮಾರಾಟಕ್ಕೆ ಇದೂ ಒಂದು ಕಾರಣ ಇರಬಹುದು ಎಂಬ ವಿಶ್ಲೇಷಣೆಯೂ ಇದೆ.
ಜಿಲ್ಲೆಯಲ್ಲಿ ಹಾವೇರಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಆರ್‌ಟಿಒ) ಮತ್ತು ರಾಣೆಬೆನ್ನೂರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಎಆರ್‌ಟಿಒ) ಕಾರ್ಯ ನಿರ್ವಹಿಸುತ್ತಿವೆ. ಹಾವೇರಿ, ಹಾನಗಲ್ಲ, ಶಿಗ್ಗಾಂವಿ ಮತ್ತು ಸವಣೂರ ನಾಲ್ಕು ತಾಲೂಕುಗಳು ಹಾವೇರಿ ಕಚೇರಿ ವ್ಯಾಪ್ತಿಗೆ ಒಳಪಟ್ಟಿದ್ದು, ರಾಣೆಬೆನ್ನೂರ, ಬ್ಯಾಡಗಿ, ಹಿರೇಕೇರೂರ ಹಾಗೂ ರಟ್ಟಿಹಳ್ಳಿ ನಾಲ್ಕು ತಾಲೂಕುಗಳು ರಾಣೆಬೆನ್ನೂರ ಕಚೇರಿ ವ್ಯಾಪ್ತಿಗೆ ಒಳಪಡುತ್ತದೆ. ಬಾಕ್ಸ್ ದ್ವಿಚಕ್ರ ವಾಹನಕ್ಕೆ ಬೇಡಿಕೆ ಹೆಚ್ಚು ರಾಣೆಬೆನ್ನೂರ ಎಆರ್‌ಟಿಒ ಕಚೇರಿಯಲ್ಲಿ 2023-24ರಲ್ಲಿ 581 ದ್ವಿಚಕ್ರ ವಾಹನ, 10 ಕಾರು, 2 ತ್ರಿಚಕ್ರ ವಾಹನ ಸೇರಿ 593 ವಾಹನ ನೋಂದಣಿಯಾಗಿವೆ. 2024-25ರಲ್ಲಿ 317 ದ್ವಿಚಕ್ರ ವಾಹನ, 8 ಕಾರು, 3 ತ್ರಿಚಕ್ರ ವಾಹನ ಸೇರಿ 328 ಇ- ವಾಹನ ಮಾರಾಟವಾಗಿವೆ. 2025-26ರ ನವೆಂಬರ್‌ವರೆಗೆ 86 ದ್ವಿಚಕ್ರ ವಾಹನ, 3 ಕಾರು ಹಾಗೂ 3 ತ್ರಿಚಕ್ರ ವಾಹನ ನೋಂದಣಿಯಾಗಿವೆ.
ಹಾವೇರಿ ಆರ್‌ಟಿಒ ಕಚೇರಿಯಲ್ಲಿ 2023-24ರಲ್ಲಿ ರಲ್ಲಿ 468 ದ್ವಿಚಕ್ರ ಇ-ವಾಹನ, 9 ಕಾರು, 8 ತ್ರಿಚಕ್ರ ವಾಹನ, 3 ಗೂಡ್ಸ್ ವಾಹನ ಮಾರಾಟವಾಗಿದೆ. 2024-25ರಲ್ಲಿ 230 ದ್ವಿಚಕ್ರ ವಾಹನ, 4 ಕಾರು, 3 ತ್ರಿಚಕ್ರ ವಾಹನ ಹಾಗೂ 6 ಗೂಡ್ಸ್ ವಾಹನ ಮಾರಾಟಗೊಂಡಿವೆ. 2025-26ರ ನವೆಂಬರ್‌ವರೆಗೆ 37 ದ್ವಿಚಕ್ರ ವಾಹನ, 3 ತ್ರಿಚಕ್ರ ವಾಹನ, 3 ಗೂಡ್ಸ್ ವಾಹನ ನೋಂದಣಿಯಾಗಿವೆ ಎಂದು ಸಾರಿಗೆ ಇಲಾಖೆ ಅಂಕಿ-ಅಂಶ ಹೇಳುತ್ತದೆ. ಬಾಕ್ಸ್ ಸಬ್ಸಿಡಿ ಉಂಟು 25 ಲಕ್ಷ ರೂವರೆಗಿನ ಇ-ವಾಹನಗಳಿಗೆ ಕೇಂದ್ರ ಸರ್ಕಾರ ರಸ್ತೆ ತೆರಿಗೆ ವಿನಾಯ್ತಿ ನೀಡಿದೆ. ಜತೆಗೆ ವಾಹನಗಳಿಗೆ ಸಬ್ಸಿಡಿ ಸಹ ನೀಡುತ್ತಿದೆ. ಈ ಮೂಲಕ ಪರಿಸ್ರ ಸ್ನೇಹಿ ವಾಹನಗಳ ಹೆಚ್ಚಿನ ಮಾರಾಟಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ ನೋಂದಣಿಯಾದ ಇವಿ ಅಂಕಿ-ಸಂಖ್ಯೆ
ವರ್ಷ ಹಾವೇರಿ ಆರ್‌ಟಿಒ ರಾಣೆಬೆನ್ನೂರ ಆರ್‌ಟಿಒ
------------------------------------
ಇ-ವಾಹನಗಳಲ್ಲಿ ದ್ವಿಚಕ್ರ ವಾಹನಗಳನ್ನು ಹೆಚ್ಚಿನ ಜನ ಖರೀದಿಸುತ್ತಿದ್ದಾರೆ. ಈ ವರ್ಷ ನೋಂದಣಿ ಕಡಿಮೆಯಾಗಿದೆ. ರಾಜ್ಯದ ಯಾವುದೇ ಆರ್‌ಟಿಒ ಕಚೇರಿಗಳಲ್ಲಿ ನೋಂದಾಯಿಸಲು ಸಾರಿಗೆ ಇಲಾಖೆ ಅವಕಾಶ ಕಲ್ಪಿಸಿದೆ. ಹಾಗಾಗಿ, ಇಲ್ಲಿ ಕಡಿಮೆಯಾಗಿರಬಹುದು.
ಜಿಲ್ಲೆಯಲ್ಲಿ ಇಲೆಕ್ಟ್ರಿಕ್ ವಾಹನಗಳ ಮಾರಾಟ ಆರಂಭದಿಂದಲೂ ಚೆನ್ನಾಗಿ ನಡೆದಿದೆ. ಖರೀದಿಸುವಾಗ ಪೆಟ್ರೋಲ್, ಡೀಸೆಲ್, ಇತರ ವಾಹನಗಳಿಗಿಂತ ಹೆಚ್ಚಿನ ಹಣ ಕೊಟ್ಟು ಖರೀದಿಸಬೇಕು, ದೂರದ ಪ್ರಯಾಣದ ವೇಳೆ ಪದೇಪದೆ ಚಾರ್ಜಿಂಗ್ ಮಾಡಬೇಕು, ಎಂಬಿತ್ಯಾದಿ ಕಾರಣಕ್ಕೆ ಈ ವರ್ಷ ಸ್ವಲ್ಪ ಮಾರಾಟದಲ್ಲಿ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿರುವ ಪರಿಣಾಮ ಜನವರಿಯಿಂದ ಮತ್ತೆ ಹೆಚ್ಚಿನ ಮಾರಾಟವಾಗುವ ನಿರೀಕ್ಷೆ ಇದೆ.