Haveri, Ranebennur, Kanike Dabbi, Theft, Case,  
ಹಾವೇರಿ

ಕಾಣಿಕೆ ಡಬ್ಬಿ ಕಳ್ಳತನ ಕೇಸ್, ಇಬ್ಬರ ಬಂಧನ; ದೇವರಗುಡ್ಡ ಮಾಲತೇಶ ದೇವರ ದೇಗುಲದ ಪ್ರಕರಣ

ರಾಣೆಬೆನ್ನೂರು: ತಾಲೂಕಿನ ದೇವರಗುಡ್ಡದ ಶ್ರೀ ಮಾಲತೇಶ ದೇವರ ದೇವಸ್ಥಾನದಲ್ಲಿ ಗುರುವಾರ ಮುಂಜಾನೆ ಕಾಣಿಕೆ ಡಬ್ಬಿಯಿಂದ ಕಳ್ಳತನಕ್ಕೆ ಯತ್ನಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿತರನ್ನು ರಾಣೆಬೆನ್ನೂರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವರಗುಡ್ಡ ಗ್ರಾಮದ ಮಾರುತಿ ಭರಲಿಂಗಪ್ಪ ಕೆಂಗಲ್ಲ ಹಾಗೂ ಅಶೋಕ ಹನುಮಂತಪ್ಪ ಹೊನಕೇರಿ ಬಂಧಿತ ಆರೋಪಿಗಳು.
ಜು.3ರಂದು ಬೆಳಗಿನ ಜಾವ 4 ಗಂಟೆ ವೇಳೆಗೆ ಕಳ್ಳರ ತಂಡ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ಬಾಗಿಲಿಗೆ ಹಾಕಿದ್ದ ಸಲಾಕೆಯನ್ನು ಕಟ್ಟಿಗೆಯಿಂದ ತೆಗೆದು ಒಳಗೆ ನುಗ್ಗಿದ್ದರು. ಬಳಿಕ ದೇಗುಲದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕೆಳ ಮುಖ ಮಾಡಿ ಕಿಂಡಿಯ ಮುಖಾಂತರ ಕೋಲಿನ ಸಹಾಯದಿಂದ ಹಣ ಹೊರಕ್ಕೆ ತೆಗೆದು ಸುಮಾರು 50,000 ರೂ. ಕಳವು ಮಾಡಿದ್ದರು.
ಕಾಣಿಕೆ ಡಬ್ಬಿಯಲ್ಲಿದ್ದ ಹಣ ದೇವಸ್ಥಾನದ ಒಳಭಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡು ಬಂದಿತ್ತು. ಈ ಕುರಿತು ದೇಗುಲದ ಅಧಿಕಾರಿ ಭರಮಪ್ಪ ಉರ್ಮಿ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರ ತಂಡ ಸಿಸಿಟಿವಿ ಕ್ಯಾಮರಾ ಮತ್ತಿತರ ಸುಳಿವಿನ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ.
ಭದ್ರತೆ ಬಲಪಡಿಸಬೇಕೆಂಬ ಒತ್ತಾಯ: ಇತಿಹಾಸ ಪ್ರಸಿದ್ಧ ಹಾಗೂ ಸಾವಿರಾರು ಭಕ್ತರ ಆರಾಧ್ಯ ಕೇಂದ್ರವಾಗಿರುವ ದೇವರಗುಡ್ಡ ಮಾಲತೇಶ ದೇವರ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವುದು ಭಕ್ತರಲ್ಲಿ ಆತಂಕ ಮೂಡಿಸಿದ್ದು, ದೇವಸ್ಥಾನದ ಭದ್ರತೆ ಮತ್ತಷ್ಟು ಬಲಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.