ಹಾವೇರಿ: ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ವಿಫಲವಾಗಿವೆ. ಹಾಗಾಗಿ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ರೈತರ ಸಂಕಷ್ಟ ಕೇಳುತ್ತಿಲ್ಲ. ಜಿಲ್ಲೆಯ ಪ್ರಮುಖ ಬೆಳೆ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಕೊಡಿಸುತ್ತಿಲ್ಲ. ಜಿಲ್ಲೆಯಲ್ಲಿ 80 ಸಾವಿರ ಬಗರ್ ಹುಕುಂ ಹಾಗೂ ಭೂ ಸಗುವಳಿ ಹಕ್ಕು ಪತ್ರಗಳನ್ನು ನೀಡುತ್ತಿಲ್ಲ ಎಂದರು.
ಈ ಬಗ್ಗೆ ತಹಸೀಲ್ದಾರ್, ತಲಾಟಿಗಳು, ಸಿಬ್ಬಂದಿ ಸರಿಯಾದ ಮಾಹಿತಿ ನೀಡದೇ ಸತಾಯಿಸುತ್ತಿದ್ದಾರೆ. ಭೂಮಿ ಸರ್ವೇ ಮಾಡಲು 12ರಿಂದ 15 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು, ಇಲ್ಲವೇ ರೈತ ಸಂಘದಿಂದ ಅಭ್ಯರ್ಥಿಗಳನ್ನು ಕಣಕ್ಕಿ ಇಳಿಸಲಾಗುವುದು. ಇತರ ರೈತ ಸಂಘಟನೆಗಳನ್ನು ವಿಲೀನ ಮಾಡಿಕೊಂಡು ಚುನಾವಣೆ ಎದುರಿಸಲಾಗುವುದು. ಈ ನಿಟ್ಟಿನಲ್ಲಿ ಭೂಮಿಪುತ್ರ ರೈತ ಸಂಘಟನೆ ಈಗಾಗಲೇ ನಮ್ಮ ಸಂಘದ ಜತೆಗೆ ವಿಲೀನಗೊಂಡಿದೆ ಎಂದರು.
ಭೂಮಿ ಪುತ್ರ ರೈತ ಸಂಘದ ಅಧ್ಯಕ್ಷ ಫಕ್ಕೀರಗೌಡ ಗಾಜೀಗೌಡ್ರ ಮಾತನಾಡಿ, ಹಾವೇರಿಯ ಕಾಗಿನೆಲೆ ರಸ್ತೆಯ ಪುಣೆ- ಬೆಂಗಳೂರು ಬೈಪಾಸ್ ಸಂಪರ್ಕಿಸುವ ಫ್ಲೈಓವರ್, ಹೆಗ್ಗೇರಿ ಕೆರೆ ಹಾಗೂ ಹಾನಗಲ್ಲ ರಸ್ತೆ ಫ್ಲೈಓವರ್ ಬಳಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಹಾವೇರಿ ಜಿಲ್ಲಾ ಕೇಂದ್ರದಿಂದ 3.5 ಕಿಮೀ ದೂರ ಇರುವ ಕನಕಾಪುರ ಗ್ರಾಮವನ್ನು 20 ಕಿಮೀ ದೂರದ ಕರ್ಜಗಿ ಹೋಬಳಿಗೆ ಸೇರಿಸಲಾಗಿದೆ. ಇದನ್ನು ಬದಲಾಯಿಸಿ ಹಾವೇರಿ ಹೋಬಳಿಗೆ ಸೇರಿಸಬೇಕು. ಗ್ರಾಮದ ನಕಾಶೆ ಸರಿಯಾಗಿ ಇಲ್ಲ. ಈ ಸಮಸ್ಯೆಗಳತ್ತ ಅಧಿಕಾರಿಗಳು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಫಕ್ಕೀರೇಶ ಕಾಳಿ, ನೀಲಪ್ಪ ಹುಲಗಮ್ಮನವರ, ಫಕ್ಕೀರಪ್ಪ ವಡಿಯನಪುರ, ಶಿವಾನಂದಪ್ಪ ಮತ್ತಿಹಳ್ಳಿ, ಸಂಗಮೇಶ ಹಾವನೂರ, ಪ್ರಕಾಶ ಬಳಿಗಾರ, ಮಂಜಪ್ಪ ಯಲಿಗಾರ, ನಿಂಗಪ್ಪ ವಾಲೀಕಾರ, ಇತರರಿದ್ದರು.
ಹೆಗ್ಗೇರಿ ಕೆರೆ, ಕಾಲುವೆ ಒತ್ತುವರಿ
ಹೆಗ್ಗೇರಿ ಕೆರೆ, ಕೆರೆ ಸಂಪರ್ಕಿಸುವ ರಾಜಕಾಲುವೆ, ಉಪ ಕಾಲುವೆಗಳು ಒತ್ತುವರಿಯಾಗಿದ್ದು, ಪರಿಣಾಮ ಹೆಗ್ಗೇರಿ ಕೆರೆಯ ನೀರು ಕೋಡಿ ಒಡೆದು ಸರಾಗವಾಗಿ ವರದಾ ನದಿ ಸೇರುತ್ತಿಲ್ಲ. ಈ ಕೂಡಲೇ ತಾಲೂಕು ಆಡಳಿತ, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು. ಒತ್ತುವರಿ ತೆರವುಗೊಳಿಸಿ, ಕೆರೆ ಉಳಿಸಬೇಕು ಎಂದು ಫಕ್ಕೀರಗೌಡ ಗಾಜೀಗೌಡ್ರ ಆಗ್ರಹಿಸಿದರು.