raita sangha, protest, 
ಹಾವೇರಿ

ರೈತರ ಸಮಾಧಿ ಮೇಲೆ ಸಾಧನಾ ಸಮಾವೇಶ; ಆತ್ಮಹತ್ಯೆ ತಡೆಗೆ ಆಗ್ರಹಿಸಿ ರೈತ ಸಂಘದಿಂದ 14ರಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ; ತ್ವರಿತ ಪರಿಹಾರಕ್ಕೆ ಆಗ್ರಹ

ಹಾವೇರಿ: ರೈತರ ಆತ್ಮಹತ್ಯೆ ತಡೆಗೆ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ರಾಜ್ಯದಲ್ಲಿ ಅತಿ ಹೆಚ್ಚು ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗುವ ಹಾವೇರಿ ಜಿಲ್ಲೆಯಲ್ಲಿ, ರೈತರ ಸಮಾಧಿ ಮೇಲೆ ರಾಜ್ಯ ಸರ್ಕಾರ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಇದನ್ನು ಖಂಡಿಸಿ ಫೆ.14ರಂದು ರೈತ ಸಂಘದಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಆತ್ಮಹತ್ಯೆ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ, ಯಾವುದೇ ಕಾರ್ಯಕ್ರಮ ಕೈಗೊಂಡಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಿಂದ ರೈತ ಕಂಗಾಲಾಗಿರುವ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ರೈತರು ಜೀವಂತವಾಗಿ ಇದ್ದಾಗ ಸರಿಯಾಗಿ ಬಿತ್ತನೆ ಬೀಜ, ರಸಗೊಬ್ಬರ, ಬೆಳೆವಿಮೆ ಪರಿಹಾರ, ವಿದ್ಯುತ್ ಕೊಡದೇ ರೈತರ ಜೀವನದ ಜತೆ ಚೆಲ್ಲಾಟವಾಡುವ ರಾಜ್ಯ ಸರ್ಕಾರ ಅದೇ ರೈತ ಸತ್ತಮೇಲೂ ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತಿದ್ದು, ಪರಿಹಾರ ನೀಡಲು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಯವರನ್ನು ಇಂಚಿಂಚು ಕೊಲ್ಲುತ್ತಿದೆ ಎಂದರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ ಮಾತನಾಡಿ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಬ್ಯಾಡಗಿ ತಾಲೂಕು ಹೊಸ ಶಿಡೇನೂರ ಗ್ರಾಮದ ರೈತನ ಕುಟುಂಬಸ್ಥರಿಗೆ 3 ವರ್ಷಗಳಾದರೂ ಈವರೆಗೆ ಪರಿಹಾರ ಬಿಡುಗಡೆ ಮಾಡಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ. ಕೂಡಲೇ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.
ಬ್ಯಾಡಗಿ ತಾಲೂಕು ಶೀಡೆನೂರ ರೈತ ನಾಗರಾಜ ಬಿದರಿ 2022ರಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ರೈತನ ಕುಟುಂಬದವರಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಕೂಡಾ ಇರಲಿಲ್ಲ. ಆದರೂ ರೈತ ಮೃತಪಟ್ಟ ದಿನದಿಂದ 3 ತಿಂಗಳ ಬಳಿಕ (8 ದಿವಸ ತಡವಾಗಿ) ಅರ್ಜಿ ಸಲ್ಲಿಸಿದ್ದನ್ನೇ ನೆಪವಾಗಿಟ್ಟುಕೊಂಡು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಒಟ್ಟು 30 ಪ್ರಕರಣ ಹಾಗೂ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸರ್ಕಾರದ ಮುಂದಿವೆ. ಕೂಡಲೇ ರೈತ ಆತ್ಮಹತ್ಯೆ ಪ್ರಕರಣಗಳನ್ನು ಇತ್ಯರ್ಥಪಡಿಸಿ ಸಮರ್ಪಕ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ತಾಲೂಕು ಗೌರವಾಧ್ಯಕ್ಷ ಸುರೇಶ ಚಲವಾದಿ, ಜಿಲ್ಲಾ ಸಂಚಾಲಕ ಗುಡ್ಡನಗೌಡ ಪ್ಯಾಟಿಗೌಡ್ರ, ಇತರರಿದ್ದರು.
ನಂಜುಂಡಸ್ವಾಮಿ ಜನ್ಮದಿನಾಚರಣೆ 13ರಂದು
ರೈತ ಚಳವಳಿಯ ಪಿತಾಮಹ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ಜನ್ಮದಿನವನ್ನು ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿರುವ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಚೇರಿಯಲ್ಲಿ ಫೆ.13ರಂದು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಾಲೂಕಾಧ್ಯಕ್ಷಪ್ಪ ದಿಳ್ಳೆಪ್ಪ ಮಣ್ಣೂರ ಮನವಿ ಮಾಡಿದರು.