Haveri, Raita Sangha Protest, For Demands,
ಹಾವೇರಿ: ರೈತರ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್ ಪೂರೈಕೆ, ಎಫ್‌ಐಡಿ ಇಲ್ಲದೇ ಗೊಬ್ಬರ ವಿತರಣೆ, ನಮ್ಮ ಹೊಲಗಳಿಗೆ ನಮ್ಮ ದಾರಿ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ತಾಲೂಕು ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟಿಸಿದ ರೈತರು, ತಹಸೀಲ್ದಾರ್ ಶರಣಮ್ಮ ಕೆ. ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಭಾರತ ಕೃಷಿ ಪ್ರಧಾನವಾದ ದೇಶ. ಶೇ.70ರಷ್ಟು ಜನ ಕೃಷಿ ಅವಲಂಭಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿನಿತ್ಯ ಹೊಸ ಹೊಸ ಕಾನೂನು ಜಾರಿಗೆ ತರುತ್ತಿದೆ. ಇದರಿಂದ ರೈತರು ಹಾಗೂ ರೈತ ಕಾರ್ಮಿಕರಿಗೆ ತೊಂದರ ಆಗುತ್ತಿದೆ. ಕಾನೂನು ಬದಲಾಗುತ್ತಿರುವುದರಿಂದ ಎಫ್.ಐ.ಡಿ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್, ಪೋಟೀ, ಉತಾರ ಇನ್ನೂ ಹಲವು ದಾಖಲೆಗಳನ್ನು ಪೂರೈಸಲು ತಿಳಿಸುತ್ತಾರೆ. ಇದರಿಂದ ಸಮಯಕ್ಕೆ ತಕ್ಕಂತೆ ಬೀಜ, ಗೊಬ್ಬರ ಸಿಗದೇ ಕಾಯಕ ಮಾಡುವುದೇ ಕಷ್ಟಕರ ಎನಿಸಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ಎಫ್‌ಐಡಿ ಇಲ್ಲದೇ ಗೊಬ್ಬರ ವಿತರಣೆ ಮಾಡಬೇಕು. ಹೆಸ್ಕಾಂನಿಂದ ಹಗಲು ಹೊತ್ತಲ್ಲಿ 7 ಗಂಟೆ ವಿದ್ಯುತ್ ವಿತರಿಸಬೇಕು. ತೋಟಗಾರಿಕೆ ಇಲಾಖೆಯಿಂದ ಎಸ್‌ಸಿ, ಎಸ್‌ಟಿ ಅನುದಾನದ ಅಡಿಯಲ್ಲಿ ಸಹಾಯಧನ ನೀಡಬೇಕು. ಚಿರತೆ, ಚಿಗರಿ ಹಾವಳಿಯಿಂದ ರೈತರ ಪ್ರಾಣಹಾನಿ, ರೈತರ ಬೆಳೆಯನ್ನು ರಕ್ಷಣೆ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಹಾವೇರಿ ಶಹರದಲ್ಲಿ ಒಳಚರಂಡಿ, ರಸ್ತೆ, ಗಟಾರ ಹದಿಗೆಟ್ಟಿದ್ದು, ನಗರಸಭೆ ವತಿಯಿಂದ ಕ್ರಮ ಜರುಗಿಸಬೇಕು.
ಬ್ಯಾಂಕಿನಿಂದ ದಬ್ಬಾಳಿಕೆ ಮಾಡಿ ಸಾಲ ವಸೂಲಾತಿಯನ್ನು ನಿಲ್ಲಿಸಬೇಕು. ನಮ್ಮ ಹೊಲ ನಮ್ಮ ದಾರಿ ಯೋಜನೆ ಸರಿಯಾಗಿ ಜಾರಿಗೊಳಿಸಬೇಕು. ಹಾವೇರಿ ತಾಲೂಕಿನಲ್ಲಿ ಬೆಳೆವಿಮೆ ಹಾಗೂ ಬೆಳೆಹಾನಿ ಬಹಳಷ್ಟು ರೈತರಿಗೆ ಅನ್ಯಾಯವಾಗಿರುತ್ತದೆ. ತಕ್ಷಣ ಸರಿಪಡಿಸಬೇಕು. ಕಬ್ಬು ಬೆಳೆದ ಬೆಳೆಗಾರರಿಗೆ ಸರ್ಕಾರ ಸರಿಯಾದ ಬೆಲೆ ಕೊಡುತ್ತಿಲ್ಲ. ಸರಿಯಾದ ಬೆಲೆ ಕೊಡಲು ಕ್ರಮ ಕೈಗೊಳ್ಳಬೇಕು. ಕಬ್ಬಿನ ದರ ಮರು ಪರಿಶೀಲಿಸಬೇಕು. ಹಾವೇರಿ ತಾಲೂಕಿನ 5 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬೆಳೆವಿಮೆ ಬಂದಿದ್ದು, ಉಳಿದ ಗ್ರಾಮ ಪಂಚಾಯಿತಿಗಳಿಗೆ ಬೆಳೆವಿಮೆ ಬಂದಿಲ್ಲ. ಇದನ್ನು ಮರುಪರಿಶೀಲಿಸಿ, ಎಲ್ಲರಿಗೂ ಬೆಳೆವಿಮೆ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಪ್ರಮುಖರಾದ ರಾಜು ತರ್ಲಗಟ್ಟ. ಭುವನೇಶ್ವರ ಶಿಡ್ಲಾಪೂರ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಚನ್ನಪ್ಪ ಮರಡೂರ, ಪಕ್ಕೀರಗೌಡ ಗಾಜಿಗೌಡ್ರ, ಸಿದ್ದನಗೌಡ ಗಡೆಪ್ಪಗೌಡ್ರ, ನಾಗರಾಜ ವಿಭೂತಿ, ಪರಮೇಶ ನರಗುಂದ, ಶಿವಯೋಗಿ ಬೆನ್ನೂರ, ಬಾಬುಸಾಬ ಲಿಂಗದಹಳ್ಳಿ, ಜಾಫರ್‌ಸಾಬ, ರೆಹಮಾನ್‌ಸಾಬ ತಟ್ಟಿಮನಿ, ಇಸಾಕ್‌ಸಾಬ ಸತ್ಯಪ್ಪನವರ, ಇತರರು ಪಾಲ್ಗೊಂಡಿದ್ದರು.