Haveri, Raita Sangha, Golibar, Hutatma Divas, June 10th, 
ಹಾವೇರಿ

ರೈತ ಹುತಾತ್ಮ ದಿನಾಚರಣೆ 10ರಂದು ; ಗೋಲಿಬಾರ್‌ನಲ್ಲಿ ಮೃತಪಟ್ಟವರ ಸ್ಮರಣೆ; ವಿವಿಧ ಬೇಡಿಕೆ ಈಡೇರಿಸಲು ರೈತ ಸಂಘದಿಂದ ಪ್ರತಿಭಟನೆ

ಹಾವೇರಿ: ರಸಗೊಬ್ಬರಕ್ಕಾಗಿ 2008ರಲ್ಲಿ ನಡೆದಿದ್ದ ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರ ಸ್ಮರಣೆಗಾಗಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜೂನ್ 10ರಂದು ಬೆಳಗ್ಗೆ 10 ಗಂಟೆಗೆ 19ನೇ ವರ್ಷದ ರೈತ ಹುತಾತ್ಮ ದಿನ ಆರಿಸಲಾಗುವುದು. ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಂದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಪ್ರಧಾನವಾದ ಜಿಲ್ಲೆಗೆ ಯಾವುದೇ ಕೈಗಾರಿಕೆಗಳು ಇಲ್ಲ. ಕೃಷಿಯನ್ನೇ ನಂಬಿ ಬದುಕುವ ರೈತರಿಗೆ ಯಾವುದೇ ಭದ್ರತೆ ಇಲ್ಲ. ಒಂದು ಸಲ ಅತಿವೃಷ್ಟಿಯಾದರೆ, ಮತ್ತೊಂದು ಸಲ ಅನಾವೃಷ್ಟಿಗೆ ರೈತ ತತ್ತರಿಸಿ ಹೋಗಿದ್ದಾನೆ. ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಹಾವೇರಿ ಕಟ್ಟಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬೀಜ, ಗೊಬ್ಬರಮ ಪೆಟ್ರೋಲ್, ಡೀಸೇಲ್, ವಿದ್ಯುತ್ ದರ ಹೆಚ್ಚಳದಿಂದ ರೈತರ ಬದುಕು ತತ್ತರಿಸಿ ಹೋಗಿದೆ. ಜಿಲ್ಲೆಯ ಸಂಸದರು, ಶಾಸಕರು ಬೆಲೆ ಏರಿಕೆ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೇ ಇರುವುದು ವಿಪರ್ಯಾಸ. ಅವೈಜ್ಞಾನಿನ ಮಾರುಕಟ್ಟೆ, ಅವೈಜ್ಞಾನಿಕ ದರ, ಅವೈಜ್ಞಾನಿಕ ಸಾಲ ನೀತಿಯಿಂದ ರೈತರ ಸಮಸ್ಯೆಗಳು ಜೀವಂತವಾಗಿವೆ. ನಾಡಿನಲ್ಲಿ ಶ್ರೀಮಂತರ ರಕ್ಷಣೆ ಮಾಡಿ, ಬಡ ರೈತರ ಸಮಾಧಿ ಮೇಲೆ ಮಹಲು ಕಟ್ಟಲು ಮುಂದಾಗಿರುವ ಸರ್ಕಾರಗಳ ನೀತಿ ಖಂಡನೀಯವಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೃಷಿ ಸಚಿವರಾಗಿದ್ದ ಚಲುವರಾಯಸ್ವಾಮಿ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಜಿಲ್ಲೆಯ ಆರು ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಕೊಡದಿರಲು ಕಾರಣವೇನು ? ಅವರು ಅಸಮರ್ಥರೇ ಎಂದು ಪ್ರಶ್ನಿಸಿದರು. ಈ ಸಲ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಕೊಡಿ. ಸ್ಥಳೀಯರು ಯಾವಾಗಲೂ ಲಭ್ಯವಿರುತ್ತಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಕೇಳಲು ಸಾಧ್ಯವಾಗುತ್ತದೆ ಎಂದರು.
ಕಳೆದ 8, 10 ದಿನಗಳ ಹಿಂದೆ ರೈತರು ಕಷ್ಟಪಟ್ಟು ಬೀಜ, ಗೊಬ್ಬರ ಸಂಗ್ರಹಿಸಿ ಸೋಯಾಬೀನ್ ಬೀಜ ಬಿತ್ತನೆ ಮಾಡಿದ್ದರು. ಈಗ ಮಳೆ, ತೇವಾಂಶದ ಕೊರತೆಯಿಂದ ಅವು ಒಣಗಿ ಹಾಳಾಗುತ್ತಿವೆ. ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಇದೆ. ಮೆಕ್ಕೆಜೋಳಕ್ಕೆ ಮಾರಾಟಗಾರರು 800ರಿಂದ 2,800 ರೂ. ವಸೂಲಿ ಮಾಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದಾರೆ. ಹತ್ತಿ ಬೀಜಕ್ಕೆ ಎಲ್ಲ ಕಂಪನಿಯವರಿಗೆ 930 ರೂ. ದರ ನಿಗಧಿಪಡಿಸಿರುವ ಸರ್ಕಾರ ಮೆಕ್ಕೆಜೋಳಕ್ಕೂ ಏಕ ರೂಪದ ದರ ನಿಗಧಿಪಡಿಸಬೇಕು. ಗೊಬ್ಬರಕ್ಕೆ ಎಫ್‌ಐಡಿ ನಿಯಮ ಸಡಿಲಿಸಬೇಕು, ಕೆರೆಗಳಿಗೆ ನೀರು ತುಂಬಿಸಬೇಕು, ಬೇಡ್ತಿ- ವರದಾ ನದಿಗಳ ಜೋಡಣೆಗೆ ಶೀಘ್ರದಲ್ಲೇ ಡಿಪಿಆರ್ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪ್ರಮುಖರಾದ ಮಾಲತೇಶ ಪೂಜಾರ, ಎಚ್.ಎಚ್.ಮುಲ್ಲಾ, ಗಂಗಣ್ಣ ಎಲಿ, ಶಿವಬಸಪ್ಪ ಗೋವಿ, ರುದ್ರಗೌಡ ಕಾಡನಗೌಡ್ರ, ಮರಿಗೌಡ ಪಾಟೀಲ, ಶಿವಯೋಗಿ ಹೊಸಗೌಡ್ರ, ಸುರೇಶ ಚಲವಾದಿ, ರಾಜು ತರ್ಕಘಟ್ಟ, ಇತರರಿದ್ದರು.
ಬಾಕಿ ಬೆಳೆವಿಮೆ ಬಿಡುಗಡೆಗೆ ಆಗ್ರಹ
ಜಿಲ್ಲೆಯಲ್ಲಿ ಸವಣೂರ ತಾಲೂಕಿನ ರೈತರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಯನ್ನು ಈವರಗೆ ವಿತರಿಸಿಲ್ಲ. ಸುಮಾರು 60ರಿಂದ 80 ಕೋಟಿ ರೂ. ಬಾಕಿ ಹಣ ರೈತರಿಗೆ ಬರಬೇಕಿದೆ. ಬಾಕಿ ಬೆಳೆವಿಮೆ ಬಿಡುಗಡೆ ಮಾಡಬೇಕು ಎಂದು ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.