haveri, rainfall 
ಹಾವೇರಿ

ಜಿಲ್ಲೆಯ ಹಲವೆಡೆ ಮೊದಲ ಮಳೆಯ ಸಿಂಚನ; ಬಿಸಿಲ ಧಗೆಗೆ ಬಸವಳಿದವರಿಗೆ ರೋಮಾಂಚನ; ಗುತ್ತಲ ಸೇರಿ ಕೆಲವೆಡೆ ಆಲಿಕಲ್ಲು ಮಳೆ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ಗುಡುಗು ಸಿಹತ, ಮಳೆ ಸುರಿದಿದೆ. ಬೇಸಿಗೆಯ ಬಿಸಿಲಿನಿಂದ ಬಸವಳಿದಿದ್ದ ಜಿಲ್ಲೆಯ ಜನತೆಗೆ ಮೊದಲ ಮಳೆಯ ಸಿಂಚನದಿಂದ ರೋಮಾಂಚನ ಉಂಟು ಮಾಡಿದೆ.
ಹಾವೇರಿ ಶಹರ, ರಾಣೆಬೆನ್ನೂರ ಶಹರ, ಗ್ರಾಮೀಣ ಪ್ರದೇಶ, ಶಿಗ್ಗಾಂವಿ, ಬಂಕಾಪುರ, ತಡಸ, ಗೊಟಗೋಡಿ ಭಾಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಹಾನಗಲ್ಲ, ಬ್ಯಾಡಗಿ ತಾಲೂಕಿನ ಕೆಲವೆಡೆ ಮೋಡ ಕವಿದ ವಾತಾವರಣ ಇತ್ತು.
ಬೆಳಗ್ಗೆಯಿಂದ ಸಂಜೆ 4ರವರೆಗೆ ಸೂರ್ಯನ ತಾಪ ಹೆಚ್ಚಾಗಿತ್ತು. ಹಾವೇರಿಯಲ್ಲಿ ಶೇ.36ರಷ್ಟು ಉಷ್ಣಾಂಶ ದಾಖಲಾಗಿತ್ತು. ಸಂಜೆ ಆಗುತ್ತಿದ್ದಂತೆ ಏಕಾಏಕಿ ಮಳೆ ಸುರಿಯಿತು. ಇದರಿಂದ ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರು ಪರದಾಡಿದರು. ಮನೆ ಸೇರಲು ಹರಸಾಹಸ ಪಟ್ಟರು. ಬೈಕ್ ಸವಾರರು ರಸ್ತೆಬದಿಗೆ ಬೈಕ್ ಪಾರ್ಕಿಂಗ್ ಮಾಡಿ ದೇವಸ್ಥಾನ, ಅಂಗಡಿಗಳಲ್ಲಿ ಆಶ್ರಯ ಪಡೆದರು.
ಗುತ್ತಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಆಲಿಕಲ್ಲು ಕಂಡು ಮಕ್ಕಳು, ಜನರು ಸಂತಸಪಟ್ಟರು.
ಕರೆಂಟ್ ಕಟ್, ವಿದ್ಯಾರ್ಥಿಗಳಿಗೆ ತೊಂದರೆ
ಸಂಜೆ ಮಳೆ, ಗಾಳಿ, ಗುಡುಗು ಆರಂಭವಾಗುತ್ತಿದ್ದಂತೆ ಹಾವೇರಿ ಶಹರ ಸೇರಿದಂತೆ ಹಲವೆಡೆ ಕರೆಂಟ್ ಕಡಿತಗೊಂಡಿತು. ಮಳೆ, ಗಾಳಿ ಹೆಚ್ಚು ಕಡಿಮೆ ಆಗುತ್ತಿದ್ದ ಕಾರಣ ಕರೆಂಟ್ ಎರಡು, ಮೂರು ತಾಸುಗಳ ಕಾಲ ಕಣ್ಣಾಮುಚ್ಚಾಲೆ ಆಡುತ್ತಿತ್ತು. ಮಾ.18ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದು, ಇದರಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಒಳಗಾದರು.