Haveri, Rain Effect, Tree Collaps, School Buildings, Collaphs,
ಹಾವೇರಿ: ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಮಿಂಚು, ಗುಡುಗು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಹತ್ತಾರು ಮರಗಳು, ಮನೆಗಳು, ವಿದ್ಯುತ್ ಕಂಬಗಳು ಉರುಳಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ.
ಹಾವೇರಿ, ಹಾನಗಲ್ಲ, ಹಿರೇಕೆರೂರ, ರಟ್ಟಿಹಳ್ಳಿ, ಬ್ಯಾಡಗಿ, ಶಿಗ್ಗಾಂವಿ, ಸವಣೂರ, ರಾಣೆಬೆನ್ನೂರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭರ್ಜರಿ ಮಳೆಯಾಗಿದೆ. ರಸ್ತೆಗಳ ಮೇಲೆ ನೀರು ಹರಿದಿದ್ೆ. ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಹಲವು ಶಾಲೆಗಳ ಮೇಲ್ಛಾವಣಿ ಹಾರಿ ಹೋಗಿವೆ.
ಹಾವೇರಿ- ಗುತ್ತಲ ರಸ್ತೆ ಕನವಳ್ಳಿ ಶಿಬಾರ ಬಳಿ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮರ ತೆರವುಗೊಳಿಸದ ನಂತರ ಸಂಚಾರ ಸುಗಮಗೊಂಡಿತು. ರಟ್ಟಿಹಳ್ಳಿ- ರಾಣೆಬೆನ್ನೂರ ರಸ್ತೆಯಲ್ಲಿ ಮರ ಬಿದ್ದು ಸಂಚಾರ ದಟ್ಟಣೆ ಉಂಟಾಗಿತ್ತು. ಶಿಗ್ಗಾಂವಿ ತಾಲೂಕು ಶಿಡ್ಲಾಪುರ ಸರ್ಕಾರಿ ಶಾಲೆ ಮೇಲ್ಛಾವಣಿ ಹಾರಿ ಹೋಗಿವೆ. ಎಲ್ಲೆಡೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಹಾವೇರಿ ನಗರದ ಎಸ್‌ಪಿ ಕಚೇರಿ ಎದುರಿನ ಹಳೇ ಪಿಬಿ ರಸ್ತೆ ಅಕ್ಷರಶಃ ನದಿಯಂತಾಗಿತ್ತು. ಶಹರ ಪೊಲೀಸ್ ಠಾಣೆ ಬಳಿ ಆವರಣಕ್ಕೆ ನೀರು ನುಗ್ಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಜನ ಪರದಾಡಿದರು.
ಬ್ಯಾಡಗಿ ಪಟ್ಟಣದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ತರಕಾರಿ, ಹಣ್ಣುಗಳು, ಇತರೆ ಸಾಮಗ್ರಿಗಳು ನೀರಿನಲ್ಲಿ ತೇಲಿಹೋದವು. ವಸ್ತುಗಳನ್ನು ಹಿಡಿಯಲು ವ್ಯಾಪಾರಿಗಳು ಹರಸಾಹಸ ಪಟ್ಟರು.