Haveri, Rain Effect, Dyamavva Devi, Special Pooja, Heggeri Lake,
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಕೊರತೆ ಉಂಟಾಗಿದ್ದು, ರೈತರು ಬಿತ್ತನೆ ಮಾಡಿರುವ ಬೆಳೆಗಳು ಒಣಗುತ್ತಿವೆ. ಇನ್ನಾದರೂ ಮಳೆ ಕೊಟ್ಟು ಇರುವ ಬೆಳೆ ರಕ್ಷಿಸಲು ಪ್ರಾರ್ಥಿಸಿ ನಗರದ ರೈತರು ಹಾಗೂ ಭಕ್ತರು ಮಂಗಳವಾರ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ, ದೇವರ ಮೊರೆ ಹೋದರು.
ನಗರದ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿ, ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಬಸವಣ್ಣನ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಮೆರವಣಿಗೆ ನಡೆಸಲಾಯಿತು. ವಿವಿಧ ಕಲಾತಂಡಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ನೂರಾರು ಭಕ್ತರು ಭಾಗವಹಿಸಿ, ಉತ್ತಮ ಮಳೆಯಾಗುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು.
ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಮೆಕ್ಕೆಜೋಳ, ಸೋಯಾಬೀನ್, ಹತ್ತಿ, ಶೇಂಗಾ, ಸೇರಿದಂತೆ ವಿವಿಧ ಬೆಳೆಗಳು ಬಾಡುತ್ತಿವೆ. ಈಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಳಿಸಿರುವ ರೈತರು ಮಳೆಯ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಬರಗಾಲದ ಛಾಯೆ ಆವರಿಸುವ ಆತಂಕ ಎದುರಿಸುತ್ತಿದ್ದಾರೆ.
ಸುಮಾರು 13 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಮತ್ತೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ ವರುಣ ದೇವನಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ನಡೆಸಿದ್ದೇವೆ ಎಂದು ರೈತರು ಹೇಳಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಲ್ಲಕ್ಕಿ ಉತ್ಸವವು ಕೊನೆಗೆ ಹೆಗ್ಗೇರಿ ಕೆರೆಯ ತಟದಲ್ಲಿ ಹೆಗ್ಗೇರವ್ವ ಗಂಗೆ ಪೂಜೆಯೊಂದಿಗೆ ಸಮಾಪ್ತಿಗೊಂಡಿತು. ಈ ವೇಳೆ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗಿ ಬೆಳೆಗಳು ಉಳಿಯಲಿ ಹಾಗೂ ರೈತರ ಬದುಕು ಸುಧಾರಿಸಲಿ ಎಂದು ಭಕ್ತರು ಪ್ರಾರ್ಥಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಹಾವೇರಿ ಶಹರ, ಆಲದಕಟ್ಟಿ, ಕೆರಿಮತ್ತಿಹಳ್ಳಿ, ಹೊಸಳ್ಳಿ, ಸುತ್ತಮುತ್ತಲಿನ ಗ್ರಾಮಗಳ ಜನರು, ರೈತರು ಪಾಲ್ಗೊಂಡಿದ್ದರು.
ಮಳೆ ಇನ್ನೂ ಕೆಲ ದಿನಗಳವರೆಗೆ ಕೈಕೊಟ್ಟರೆ ಬೆಳೆ ನಷ್ಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು. ರೈತರಿಗೆ ಅಗತ್ಯ ಸಲಹೆ, ಸಹಕಾರ, ತುರ್ತು ಕ್ರಮಗಳ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.