Haveri, Rabenennuer, Hirebidari, Tahasildar Visit, Paddy, Craft loss,  
ಹಾವೇರಿ

ಭತ್ತ, ಅಡಿಕೆ ಬೆಳೆಗಾರರಿಗೆ ಪರಿಹಾರಕ್ಕಾಗಿ ಕ್ರಮ; ಹಿರೇಬಿದರಿಯಲ್ಲಿ ತಹಸೀಲ್ದಾರ್ ಆರ್.ಎಚ್.ಭಗವಾನ್ ಭರವಸೆ

ರಾಣೆಬೆನ್ನೂರ: ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಗುರುವಾರ ಸುರಿದ ಆಲಿಕಲ್ಲು ಮಳೆಗೆ ಗ್ರಾಮದ ಸಾವಿರಾರು ಎಕರೆ ಭತ್ತ ಹಾಗೂ ಅಡಿಕೆ ಹಾನಿಗೀಡಾಗಿದ್ದು, ಸರ್ಕಾರದ ನಿಯಮಾವಳಿ ಪ್ರಕಾರ ರೈತರಿಗೆ ಪರಿಹಾರ ಒದಗಿಸುವಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಆರ್.ಎಚ್.ಭಗವಾನ್ ಭರವಸೆ ನೀಡಿದರು.
ಹಿರೇಬಿದರಿ ಗ್ರಾಮದ ಭತ್ತ, ಅಡಿಕೆ ಹಾನಿಗೀಡಾದ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ತಹಸೀಲ್ದಾರ್, ರೈತರೊಂದಿಗೆ ಸಮಾಲೋಚನೆ ನಡೆಸಿದರು. ರೈತರ ಅಹವಾಲುಗಳನ್ನು ಆಲಿಸಿ, ಬೆಳೆಹಾನಿ ಪರಿಶೀಲಿಸಿದರು.
ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ, ಅಡಿಕೆ ಬೆಳೆ ಆಲಿಕಲ್ಲು ಮಳೆಗೆ ಹಾನಿಗೀಡಾಗಿರುವುದು ಕಂಡು ಬಂದಿದೆ. ಜಿಪಿಎಸ್ ಫೋಟೋ ತೆಗೆದು ಪರಿಹಾರ ಆ್ಯಪ್‌ನಲ್ಲಿ ಎಂಟ್ರಿ ಮಾಡಿಸಲಾಗುವುದು. ನಂತರ ಸರ್ಕಾರದ ನಿಯಮಾವಳಿ ಪ್ರಕಾರ ಭತ್ತ ಹಾಗೂ ಅಡಿಕೆ ಬೆಳೆ ಹಾನಿಗೆ ಒಂದು ಹೆಕ್ಟೇರ್‌ಗೆ 18 ಸಾವಿರ ರೂ. ಬೆಳೆಹಾನಿ ಪರಿಹಾರ ಲಭ್ಯವಾಗಲಿದೆ ಎಂದು ತಹಸೀಲ್ದಾರ್ ಭಗವಾನ್ ‘ವಿಜಯವಾಣಿ’ಗೆ ತಿಳಿಸಿದರು.