- ಆರೋಗ್ಯ ಸರಿ ಇಲ್ಲದಿದ್ದರೆ ಎಲ್ಲವೂ ಶೂನ್ಯ
- ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು
- ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ
- ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಲಹೆ
ಹಾವೇರಿ: ಆಧುನಿಕ ಜಗತ್ತಿನಲ್ಲಿ ಇಂದು ಮನುಷ್ಯ ಏನೆಲ್ಲವನ್ನೂ ಸಂಪಾದಿಸಬಹುದು. ಆದರೆ, ಆರೋಗ್ಯ ಸರಿ ಇಲ್ಲದಿದ್ದರೆ ಎಲ್ಲವೂ ಶೂನ್ಯ ಆಗುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅದರಲ್ಲೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಒತ್ತಡದಿಂದ ಹೊಡ ಬರಬೇಕಾದರೆ ನಿತ್ಯವೂ ಒಂದಿಲ್ಲ ಒಂದು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಲಹೆ ನೀಡಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರು ತಮ್ಮ ಜೀವನ ಪಣಕ್ಕಿಟ್ಟು ಜನರ ಶಾಂತಿ ಮತ್ತು ನೆಮ್ಮದಿಗೆ ಹಾಗೂ ಸಮಾಜದಲ್ಲಿನ ಅಪರಾಧ ಕೃತ್ಯಗಳನ್ನು ತಡೆಯುವುದರ ಮೂಲಕ ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ರಕ್ಷಿಸುತ್ತಿದ್ದಾರೆ. ಹೀಗೆ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ಇಂತಹ ಕ್ರೀಡಾಕುಟಗಳು ಬೂಸ್ಟರ್ ಡೋಸ್ ಇದ್ದಂತೆ. ಒತ್ತಡದ ಬದುಕಿಗೆ ಕ್ರೀಡಾ ಚಟುವಟಿಕೆಗಳು ಮನುಷ್ಯನಲ್ಲಿ ನವಚೈತನ್ಯ ಮತ್ತು ಉತ್ಸಾಹ ತುಂಬುತ್ತವೆ ಎಂದರು.
ಪ್ರಾಚೀನ ಕಾಲದಿಂದಲೂ ಯಾವುದೇ ಒಂದು, ಆಡಳಿತ ವ್ಯವಸ್ಥೆಯಲ್ಲಿ ಎರಡು ಪ್ರಮುಖ ಜವಾಬ್ದಾರಿಗಳಿವೆ. ಅದರಲ್ಲಿ ಮೊದಲನೇಯದು ರಾಜ್ಯಸ್ವ ಸಂಗ್ರಹಣೆ ಮತ್ತು ಒಡಾಳಿತ ನಿರ್ವಹಣೆ, ಎರಡನೇಯದ್ದು ಪ್ರಾಂತ್ಯಗಳ ರಕ್ಷಣೆ ಮೊದಲನೇ ಕೆಲಸವನ್ನು ಕಂದಾಯ ಇಲಾಖೆ ಮಾಡಿದರೆ ಎರಡನೆಯ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿಕೊಂಡು ಬಂದಿದೆ ಎಂದರು.
ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ಪೊಲಿಸರಿಗೆ ಬೇರೆ ಇಲಾಖೆಗಳಂತೆ ನಿರ್ದಿಷ್ಟ ಕಾಲ ಮಿತಿಯಿಲ್ಲ. ಸಮಾಜದಲ್ಲಿ ನಡೆಯುವ ಕೊಲೆ, ಸುಲಿಗೆ, ಕಳ್ಳತನ ಇದರ ನಡುವೆ ಹಬ್ಬ ಹರಿದಿನಗಳು, ದಿನಾಚರಣೆಗಳು ಹಾಗೂ ಇನ್ನಿತರೆ ಕೆಲಸದ ಒತ್ತಡ, ಹೀಗೆ ಬೇರೆ ಬೇರೆ ಸವಾಲುಗಳೊಂದಿಗೆ ಒತ್ತಡ ಅನುಭವಿಸುತ್ತಾರೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಅನಿರೀಕ್ಷಿತವಾಗಿ ಉಂಟಾದ ಒತ್ತಡವನ್ನು ಶಮನಗೊಳಿಸಲು ಕ್ರೀಡಾಕೂಟಗಳು ಉಪಯುಕ್ತವಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸ್ವಾಗತಿಸಿದರು.
ಬಳಿಕ ಪರೇಡ್ ಕಮಾಂಡರ್ ಆರ್‌ಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ 6 ಪ್ಲಟೂನ್‌ಗಳಾದ ಹಾವೇರಿ ಉಪ ವಿಭಾಗ, ಶಿಗ್ಗಾಂವಿ ಉಪ ವಿಭಾಗ, ಮಹಿಳಾ ಪೊಲೀಸ್ ಹಾವೇರಿ, ರಾಣೆಬೆನ್ನೂರ ಉಪ ವಿಭಾಗ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾವೇರಿ, ವಿಶೇಷ ಘಟಕ ಹಾವೇರಿ ಇವರಿಂದ ಪಥಸಂಚಲನ ನಡೆಯಿತು. ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಬಳಿಕ ಪೊಲೀಸ್ ಪೇದೆ ಸಂತೋಷ ನಾಯ್ಕ ಕ್ರೀಡಾ ಜ್ಯೋತಿ ಹಿಡಿದು ಸಾಗಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ.ಎಲ್. ನಾಗರಾಜ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪುನೀತ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಶಿರಕೋಳ, ಜಿಲ್ಲೆಯ ಎಲ್ಲ ವಿಭಾಗದ ಪೊಲೀಸ್ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಖುಷಿ ವಿಚಾರದಲ್ಲಿ ಭಾರತ ಹಿಂದೆ
ಗ್ರೋಸ್ ನ್ಯಾಷನಲ್ ಹ್ಯಾಪಿನೆಸ್ ರಿಪೋರ್ಟ್ ಪ್ರಕಾರ ಯಾವೆಲ್ಲ ದೇಶದ ಜನರು ಹೇಗೆ ಖುಷಿಯಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಷ್ಟು ಖುಷಿಯಲ್ಲಿದ್ದಾರೆ ಎಂಬುವುದನ್ನು ನೋಡುವುದಾಗಿದೆ. ಇದರಲ್ಲಿ ಭಾರತ ದೇಶವು 143 ದೇಶಗಳ ಪೈಕಿ 126ನೇ ಸ್ಥಾನದಲ್ಲಿದೆ. ಆರೋಗ್ಯ ಇದ್ದರೆ ಸಂತೋದಿಂದ ಬದುಕಲು ಸಾಧ್ಯ. ಹಾಗಾಗಿ, ನಾವೆಲ್ಲರೂ ಮೊದಲು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಡಿಸಿ ಕರೆ ನೀಡಿದರು.