ಹಾವೇರಿ: ಸದೃಢವಾದ ದೇಹಕ್ಕೆ ಸದೃಢವಾದ ಮನಸ್ಸು ನೆಲೆಗೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಸದೃಢ ದೇಹದ ಜತೆಗೆ ಮಾನಸಿಕ ಸದೃಢತೆ ಅವಶ್ಯಕತೆ ಇದೆ ಎಂದು ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಸೋತವರು ಮುಂದಿನ ಬಾರಿ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಹೊಂದಿರಬೇಕು. ವಿಜೇತರಾದ ಹಾವೇರಿ ಜಿಲ್ಲೆಯ ಪೊಲೀಸರು ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದರು.
ನಮ್ಮ ಇಲಾಖೆಯಲ್ಲಿ ನಡೆಯುವಷ್ಟು ಅಚ್ಚುಕಟ್ಟಾಗಿ ಯಾವ ಇಲಾಖೆಯಲ್ಲೂ ಕ್ರೀಡಾಕೂಟಗಳು ನಡೆಯುವುದಿಲ್ಲ. ಮುಂದೆ ಸಹ ಹೀಗೆ ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಇತರರಿದ್ದರು.
ಕಳೆದ ಮೂರು ದಿನಗಳಿಂದ ಜರುಗಿದ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಬಾನಂಗಳದಲ್ಲಿ ವಿವಿಧ ಚಿತ್ತಾರಗಳ ಸಿಡಿಮದ್ದು ಸಿಡಿಸುವ ಮೂಲಕ ಕ್ರೀಡಾಕೂಟಕ್ಕೆ ವರ್ಣರಂಜಿವಾಗಿ ತೆರೆ ಎಳೆಯಲಾಯಿತು.