Haveri, PM Modi, Exhibition, Innagurated, by Bommai,  
ಹಾವೇರಿ

2019ಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ; ಯುಪಿಎ ಅವಧಿಯಲ್ಲಿ ಭಾರತಕ್ಕೆ ಗ್ರಹಣ ಹಿಡಿದಿತ್ತು; ಎನ್‌ಡಿಎ ಅವಧಿಯಲ್ಲಿ ಶುಕ್ರದೆಸೆ, ಬೊಮ್ಮಾಯಿ

ಹಾವೇರಿ: ಯುಪಿಎ ಅವಧಿಯಲ್ಲಿ ಭಾರತಕ್ಕೆ ಗ್ರಹಣ ಹಿಡಿದಿತ್ತು ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಗ್ರಹಣ ಬಿಡಿಸಿ ಅಭಿವೃದ್ಧಿಯ ಶುಕ್ರದೆಸೆ ಆರಂಭವಾಗಿದೆ. ದೇಶದ ಅಭಿವೃದ್ಧಿಗಾಗಿ 2029ಕ್ಕೆ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 12 ವರ್ಷಗಳ ಜನಪರ ಯೋಜನೆಗಳ ಕುರಿತ ಪ್ರದರ್ಶಿನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ 2047ಕ್ಕೆ ವಿಕಸಿತ ಭಾರತ, ಆತ್ಮನಿರ್ಭರ ಭಾರತ ಕಲ್ಪನೆಯೊಂದಿಗೆ ಭಾರತವನ್ನು ಮುನ್ನಡೆಸುತ್ತಿದ್ದಾರೆ. ದೇಶವನ್ನು ಸದೃಢವಾಗಿ ಮುನ್ನಡೆಸುವ ದೇಶಪ್ರೇಮಿ ಪ್ರಧಾನಿ ನಮಗೆ ಸಿಕ್ಕಿರುವುದು ಭಾರತದ ಭಾಗ್ಯ ಎಂದರು.
ಸ್ವಾತಂತ್ರಾೃ ನಂತರದ ಭಾರತದಲ್ಲಿ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿರುವ ದಾಖಲೆಯನ್ನು ನರೇಂದ್ರ ಮೋದಿ ಮಾಡಿದ್ದಾರೆ. ಭಯೋತ್ಪಾದನೆ ನಿರ್ಮೂಲನೆ, ನಕ್ಸಲ್ ಚಟುವಟಿಕೆ ನಿರ್ಮೂಲನೆ, ಗಡಿಗಳ ರಕ್ಷಣೆ ಸೇರಿದಂತೆ ಅನೇಕ ಜನಪರ ಕೆಲಸ ಮಾಡಿದ್ದಾರೆ. 25 ಲಕ್ಷ ಜನರನ್ನು ಬಡತನದಿಂದ ಮೇಲೆ ತಂದಿದ್ದಾರೆ. ಬಡವರಿಗೆ ಸುಮಾರ 4 ಕೋಟಿ ಮನೆ ನೀಡಿದ್ದಾರೆ. ಸುಮಾರು 9 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕ, ಜಲ ಜೀವನ ಮಿಷನ್ ಅಡಿ ಹರ್ ಘರ್ ಗಂಗೆ ಯೋಜನೆಗಳ ಮೂಲಕ ಶೇ.70ರಷ್ಟು ಬಡವರ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದಾರೆ. ಸುಮಾರು 80 ಕೋಟಿ ಜನರಿಗೆ ಪೌಷ್ಟಿಕ ಆಹಾರ ಉಚಿತವಾಗಿ ನೀಡುತ್ತಿದ್ದಾರೆ ಎಂದರು.
ಮಹಿಳೆಯರಿಗೆ ಸಂಜಿವಿನಿ, ಲಕ್‌ಪತಿ ದೀದಿ, ಯುವಕರಿಗೆ ಉತ್ತೇಜನ ಕೊಟ್ಟಿದ್ದಾರೆ. ಮೋದಿಯವರು ಪ್ರಧಾನಿಯಾಗುವ ಮುನ್ನ ದೇಶದಲ್ಲಿ ಸುಮಾರು 32 ಮೆಡಿಕಲ್ ಕಾಲೇಜುಗಳಿದ್ದವು. ಈಗ 172 ಮೆಡಿಕಲ್ ಕಾಲೇಜು ನಿರ್ಮಾಣ, 72 ಹೊಸ ವಿಮಾನ ನಿಲ್ದಾಣ ಆಗಿವೆ. ವಿಶೇಷವಾಗಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 22 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಹಾವೇರಿ ಜಿಲ್ಲೆಗೆ 1.5 ಲಕ್ಷ ರೈತರಿಗೆ 30 ಕೋಟಿ, ಗದಗ ಜಿಲ್ಲೆಗೆ 1 ಲಕ್ಷ ರೈತರಿಗೆ 20 ಕೋಟಿ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಮುಖಂಡರಾದ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ಕಿರಣ ಕೊಳ್ಳಿ, ನೀಲಪ್ಪ ಚಾವಡಿ, ಸಂತೋಷ ಆಲದಕಟ್ಟಿ, ಕಿರಣ ಕೋಣನವರ, ನಿರಂಜನ ಹೆರೂರ, ರಾಮು ಮಾಳಗಿ, ಮತ್ತಿತರರು ಉಪಸ್ಥಿತರಿದ್ದರು.
ಭ್ರಷ್ಟಾಚಾರ ನಿಯಂತ್ರಣ
ಪ್ರಧಾನಿ ಮೋದಿಯವರು ಭ್ರಷ್ಟಾಚಾರ ತಡೆಗೆ ಜನಧನ್ ಅಕೌಂಟ್ ತೆರೆಯುವ ಮೂಲಕ ಎಲ್ಲರನ್ನೂ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಿಸಿದರು. ಮಧ್ಯವರ್ತಿಗಳ ಹಾವಳಿ ಇಲ್ಲ. ಈಗ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಈ ಮೂಲಕ ಭ್ರಷ್ಟಾಚಾರ ಕಿತ್ತೊಗೆಯುವ ಕೆಲಸ ಮಾಡಿದ್ದಾರೆ. ಭಾರತವನ್ನು ವಿಶ್ವದಲ್ಲಿ ಅತಿ ಶ್ರೇಷ್ಠ ರಾಷ್ಟ್ರ ಮಾಡಿದ್ದಾರೆ. 2047ಕ್ಕೆ ವಿಕಸಿತ ಭಾರತ ಕಲ್ಪನೆ ಕೊಟ್ಟಿದ್ದಾರೆ. ಎಲ್ಲರ ಕೈ ಬಲಪಡಿಸಬೇಕು. ಎಲ್ಲರೂ ಕೈಜೋಡಿಸಬೇಕು ಅಂತ ಮಾಡಿದ್ದಾರೆ. ವಿದೇಶಗಳ ಮೇಲೆ ಅವಲಂಬಿತ ಆಗದೇ ಆತ್ಮನಿರ್ಭರ ಆಗಬೇಕು. ಹೀಗಾಗಿ ಐಟಿ, ಬಿಟಿ ಎಐ ನಲ್ಲಿ ಭಾರತ ನಂಬರ್ ಒನ್ ಇದೆ ಎಂದರು ಬೊಮ್ಮಾಯಿ.