New Year Party 
ಹಾವೇರಿ

ಹೊಸ ವರ್ಷಕ್ಕೆ ಭಾರಿ ಮದ್ಯ ಮಾರಾಟ; 7,500 ಬಾಕ್ಸ್ ಮದ್ಯ, 3,000 ಬಾಕ್ಸ್ ಬಿಯರ್ ಸೇಲ್; ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಕುಪ್ಪಳಿಸಿದ ಜನ

ಹಾವೇರಿ: ಹೊಸ ವರ್ಚಾಚರಣೆ ನೆಪದಲ್ಲಿ ಜಿಲ್ಲೆಯಲ್ಲಿ ಬುಧವಾರ, ಗುರುವಾರ ಭಾರೀ ಪ್ರಮಾಣದ ಮದ್ಯ ಮಾರಾಟವಾಗಿದೆ. ಬುಧವಾರ ಒಂದೇ ದಿನ ಕೆಎಸ್‌ಡಿಸಿಎಲ್‌ನಿಂದ 7,500 ಬಾಕ್ಸ್ ಮದ್ಯ ಹಾಗೂ 3,000 ಬಾಕ್ಸ್ ಬಿಯರ್ ಮಾರಾಟ ಮಾಡಲಾಗಿದೆ.
ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಜನ ಬುಧವಾರ ರಾತ್ರಿ 12 ಗಂಟೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ನೃತ್ಯ ಮಾಡುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡರು. ಕೆಲವರು ಕರೋಕೆ ಹಾಡು ಹಾಡಿ ಖುಷಿ ಪಟ್ಟರೆ, ಇನ್ನು ಕೆಲವರು ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಿಸಿದರು. ಒಟ್ಟಾರೆ ತಡರಾತ್ರಿವರೆಗೆ ಜನರ ಸಂಭ್ರಮ ಮುಗಿಲು ಮುಟ್ಟಿತ್ತು.
ಹಾವೇರಿ, ರಾಣೆಬೆನ್ನೂರ ಸೇರಿ ಜಿಲ್ಲೆಯಾದ್ಯಂತ ಹೊಸ ವರ್ಷ ಸ್ವಾಗತಕ್ಕೆ ಸಜ್ಜಾಗಿದ್ದ ಜನ ಮನೆಯ ಮುಂದೆ ರಂಗೋಲಿ ಬಿಡಿಸಿದ್ದರು. 12 ಗಂಟೆ ಆಗುತ್ತಿದ್ದಂತೆ ಸಂಗೀತದ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮಕ್ಕಳಂತೂ ಕೇಕ್ ಕತ್ತರಿಸಿ ಹಂಚುವ ಮೂಲಕ ಖುಷಿಪಟ್ಟರು. ಪರಸ್ಪರ ಹೊಸ ವರ್ಷದ ಶುಭಾಷಯ ಕೋರಿದರು.
ದೇಗುಲಗಳಲ್ಲಿ ಪ್ರಾರ್ಥನೆ :
ಗುರುವಾರ ಬೆಳಗ್ಗೆಯಿಂದಲೇ ಭಕ್ತರು ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. 2025ರ ಹೊಸ ವರ್ಷ ಶುಭಕರವಾಗಿರಲಿ. ಆರೋಗ್ಯ, ನೆಮ್ಮದಿ ಜತೆಗೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ಪ್ರಾರ್ಥಿಸಿದರು.