Haveri, Nelogal, GTTC, Diploma, Courses, for SSLC, Students,  
ಹಾವೇರಿ

ಸರ್ಕಾರಿ ಜಿಟಿಟಿಸಿಯಲ್ಲಿ ಡಿಪ್ಲೊಮಾ ಪ್ರವೇಶಾತಿ; ಎಸ್ಸೆಸ್ಸೆಲ್ಸಿ ಪಾಸಾದವರಿಗೆ ತರಬೇತಿಗೆ ಅವಕಾಶ

ಹಾವೇರಿ: ತಾಲೂಕಿನ ನೆಲೋಗಲ್ ಗುಡ್ಡದ ಮೇಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಸುಸಜ್ಜಿತ ಸೌಲಭ್ಯಗಳೊಂದಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ವಾತಾರವರಣ ನಿರ್ಮಾನವಾಗಿದೆ ಎಂದು ಕೇಂದ್ರದ ಪ್ರಾಂಶುಪಾಲ ಅಶ್ವಿನಕುಮಾರ ಸೋಮಣ್ಣನವರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಟಿಟಿಸಿಯಲ್ಲಿ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಉದ್ಯೋಗಾವಕಾಶಗಳಿವೆ. ಎಸ್‌ಎಸ್‌ಎಲ್‌ಸಿ ಮುಗಿಸಿದ ವಿದ್ಯಾರ್ಥಿಗಳು ಕೋರ್ಸ್‌ಗೆ ಪ್ರವೇಶಾತಿ ಪಡೆಯಲು ಅರ್ಹರು. ಪ್ರಸ್ತುತ ನಮ್ಮ ಕಾಲೇಜಿನಲ್ಲಿ 180 ಸೀಟುಗಳಿವೆ ಎಂದರು.
ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈಮೇಕಿಂಗ್ (ಡಿಟಿಡಿಎಂ) ವಿಭಾಗದಲ್ಲಿ 60 ಸೀಟುಗಳಿವೆ. ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ (ಮೆಕಾನಿಕ್ಸ್ ಹಾಗೂ ಎಲೆಕ್ಟ್ರಾನಿಕ್ಸ್) ಕೋರ್ಸ್‌ನಲ್ಲಿ 60 ಸೀಟುಗಳಿವೆ. ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್‌ನಲ್ಲಿ 40 ಸೀಟುಗಳಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಪ್ರವೇಶಾತಿ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಕಾಲೇಜ್ ಕಚೇರಿ ಸಂಪರ್ಕಿಸಬಹುದು ಎಂದು ಹೇಳಿದರು.
ಕಾಲೇಜ್ ಬಳಿಯೇ ಸುಸಜ್ಜಿತವಾದ ಬಾಲಕರ ವಸತಿ ನಿಲಯವಿದೆ. ಹೊಸದಾಗಿ ಬಾಲಕಿಯರ ವಸತಿ ನಿಲಯ ಸ್ಥಾಪನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಸ್ ಸೌಕರ್ಯಕ್ಕೂ ವಾ.ಕ.ರ.ಸಾ.ಸಂ. ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಜಿಟಿಟಿಸಿ ಕೇಂದ್ರದ ಆಡಳಿತಾಧಿಕಾರಿ ಬೀರಪ್ಪ ನೆಟ್ಟಕಲ್ಲಣ್ಣನವರ, ಇತರರಿದ್ದರು.