ಹಾವೇರಿ: ಪ್ರೀತಿ, ಭ್ರಾತೃತ್ವ ಹಾಗೂ ಸಮಾನತೆಯ ಸಂದೇಶ ಸಾರುವ, ದಾನ, ಧರ್ಮಗಳ ಪ್ರತೀಕವಾಗಿರುವ ರಂಜಾನ್ ಹಬ್ಬವನ್ನು ಶನಿವಾರ ಜಿಲ್ಲೆಯಾದ್ಯಂತ ಮುಸ್ಲಿಂ ಸಮಾಜದವರು ಸಂತಸ, ಸಡಗರದಿಂದ ಆಚರಿಸಿದರು. ಸುಡುವ ಬಿಸಿಲಿನಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿತ್ತು.
ರಂಜಾನ್ ಮಾಸ ಪೂರ್ತಿ ಕಠಿಣ ಉಪವಾಸ ವ್ರತಾಚರಣೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಮುಸ್ಲಿಂ ಸಮಾಜದವರು, ಶುಕ್ರವಾರ ಚಂದ್ರನ ದರ್ಶನ ಪಡೆದು, ಶನಿವಾರ ಸಂಭ್ರಮದಿಂದ ಹಬ್ಬ ಆಚರಿಸಿದರು. ಜ್ಲಿಲೆಯ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ಸುರಕುಂಬಾ, ಬಿರಿಯಾನಿ, ಮತ್ತಿತರ ವಿವಿಧ ಬಗೆಯ ಆಹಾರ ಸೇವಿಸಿದರು.
ಹಾವೇರಿ ನಗರದ ಅಂಜುಮನ್ ಏ-ಇಸ್ಲಾಂ ಕಮೀಟಿಯ ಈದ್ಗಾ ಮೈದಾನದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಹಿರಿಯರು, ಕಿರಿಯರು ಎಲ್ಲರೂ ಸೇರಿ ಸಾಮೂಹಿಕವಾಗಿ ಶುಭಾಶಯ ಕೋರುವುದರ ಮೂಲಕ, ಸಕಾಲಕ್ಕೆ ಉತ್ತಮ ಮಳೆ ಬೆಳೆಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಈದ್ಗಾ ಮೈದಾನಕ್ಕೆ ಕೆಲ ಜನಪ್ರತಿನಿಧಿಗಳು ಭೇಟಿ ನೀಡಿ ಶುಭ ಕೋರಿದರು.
ಸಾಮೂಹಿಕ ಪ್ರಾರ್ಥನೆ ಬಳಿಕ ತಮ್ಮ ಆದಾಯದಲ್ಲಿ ಒಂದಷ್ಟು ಭಾಗದ ದವಸ, ಧಾನ್ಯ, ಹಣ್ಣು-ಹಂಪಲು, ನಾಣ್ಯಗಳನ್ನು ದಾನ ಮಾಡುವುದರ ಮೂಲಕ ಅಲ್ಲಾಹನ ಕೃಪೆಗೆ ಪಾತ್ರರಾದರು.ಮುಸ್ಲಿಂ ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು, ಬಂಧು ಬಾಂಧವರನ್ನು ಭೇಟಿ ಮಾಡಿ ಸಿಹಿ ಹಂಚುವ ಮೂಲಕ ಹಬ್ಬಕ್ಕೆ ಹೊಸ ಮೆರುಗು ತಂದರು.
ಈದ್ಗಾ ಮೈದಾನಕ್ಕೆ ಶಾಸಕ ರುದ್ರಪ್ಪ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ ಮೈದೂರ ಇತರ ರಾಜಕೀಯ ಮುಖಂಡರು ಭೇಟಿ ನೀಡಿ ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು.
ಪ್ರಾರ್ಥನೆಯಲ್ಲಿ ಅಂಜುಮನ್ ಕಮೀಟಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ್, ಉಪಾಧ್ಯಕ್ಷ ಇಮಾಮಹುಸೇನ್ ಬಾಲೆಬಾಯಿ, ಕಾರ್ಯದರ್ಶಿ ಮುಜಾಫರ್ ಕೊಟ್ಟಿಗೇರಿ, ಖಜಾಂಚಿ ಚಮನಶರೀಫ್ ಮುಲ್ಲಾ, ಕಮೀಟಿ ಸದಸ್ಯ ಜಮೀರ ಜಿಗರಿ, ಪ್ರಮುಖರಾದ ಅನ್ವರ್ ಕಡೇಮನಿ, ನಾಸೀರಖಾನ್ ಪಠಾಣ, ನಜೀರ್ ಹುಸೇನ್ ನದಾಫ, ಬಾಬುಸಾಬ ಮೋಮಿನಗಾರ, ನಜೀರ್‌ಅಹ್ಮದ್ ಪಟೇಲ, ಅನ್ವರಸಾಬ ಕೊಟ್ಟಿಗೇರಿ, ಸಿ.ಎಸ್ ಹತ್ತಿಕಾಳ, ಸೈಯ್ಯದ್ ಬಿಲೋರಿ, ಉಸ್ಮಾನಸಾಬ ಪಟವೇಗಾರ, ಸುಲೇಮಾನ್ ಭಾಷಾ ಮೇಲ್ಮುರಿ, ಎಸ್.ಎ.ಪಠಾಣ, ಖಲೀಲಹ್ಮದ್ ಪಟವೇಗಾರ, 12 ಮಸೀದಿಗಳ ಗುರುಗಳು, ಅಂಜುಮನ್ ಕಮೀಟಿ ಪದಾಧಿಕಾರಿಗಳು, ಸೇರಿ ಸಹಸ್ರಾರು ಜನ ಪಾಲ್ಗೊಂಡಿದ್ದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಧರ್ಮಗುರುಗಳಾದ ಮನ್‌ಮಸೂತಿ ಮುಫ್ತಿ ನಿಹಾಲುದ್ದೀನ್, ಹಜರತ್ ಮೌಲಾಲಿ ಮುಲ್ಲಾ, ದಾದಾಪೀರ ಮುಲ್ಲಾ ಮಾತನಾಡಿ, ಮುಸ್ಲಿಮರು ಶ್ರದ್ದಾಭಕ್ತಿ, ನಿಷ್ಠೆಯಿಂದ ಆಚರಿಸುವ ಪವಿತ್ರ ಹಬ್ಬ ಇದಾಗಿದೆ. ಈ ಹಬ್ಬದಲ್ಲಿ ಇಡೀ ತಿಂಗಳು ಕಟ್ಟುನಿಟ್ಟಾಗಿ ಉಪವಾಸ ಆಚರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಶಾಂತಿ, ಸೌಹಾರ್ದತೆಯ ಸಂಕೇತವಾಗಿರುವ ರಂಜಾನ್ ಪವಿತ್ರತೆಯ ಸಂಕೇತ. ಆತ್ಮ ಪರಿಶುದ್ಧತೆಯ ತತ್ವ ಸಾರುವ ವಿಶೇಷ ಹಬ್ಬವಾಗಿದೆ ಎಂದು ತಿಳಿಸಿದರು. ಕಳೆದ ವರ್ಷದಂತೆ ಈ ವರ್ಷವೂ ಸಕಾಲಕ್ಕೆ ಉತ್ತಮ ಮಳೆಯಾಗಿ, ರೈತರು ಸಮೃದ್ಧ ಫಸಲುಗಳನ್ನು ಬೆಳೆಯುವಂತಾಗಲಿ. ಜನ ಜಾನುವಾರುಗಳು ಆರೋಗ್ಯದಿಂದ ಇರುವಂತೆ ಸಾಮೂಹಿಕವಾಗಿ ಪ್ರಾರ್ಥಿಸಿದರು.