ಹಾವೇರಿ: ನಗರದ ಹೊಸಮಠದ ಎದುರಿನ ಬಸವೇಶ್ವರ ವೃತ್ತದಿಂದ ಮಾಗಾವಿ ಟಾಕೀಸ್ ಮಾರ್ಗವಾಗಿ ಮುಲ್ಲಾನ ಕೆರೆವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಕೂಡಲೇ ಇಲ್ಲಿ ನೂತನ ಡಾಂಬಾರು ರಸ್ತೆ ನಿರ್ಮಿಸಬೇಕು ಎಂಬ ಕೂಗು ಕೇಳಿ ಬಂದಿದೆ.
ಈ ಭಾಗದಲ್ಲಿ ಅಂಜುಮನ್ ಪ್ರೌಢಶಾಲೆ, ಎಸ್‌ಎಂಎಸ್, ಎಸ್‌ಜೆಎಂ ಸೇರಿದಂತೆ ಇತರ ಶಾಲಾ, ಕಾಲೇಜ್‌ಗಳು ಇದ್ದು, ನಿತ್ಯವೂ ಇಲ್ಲಿ ಸಾವಿರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಂಚರಿಸುತ್ತಾರೆ. ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಇಲ್ಲಿ ಸರಳವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಮಳೆಗಾಲ ಬಂದರೆ ಸಾಕು ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತದೆ. ರಸ್ತೆ ಯಾವುದು, ಗುಂಡಿ ಯಾವುದು ತಿಳಿಯುವುದಿಲ್ಲ.
ಸದ್ಯ ಬೇಸಿಗೆಯಲ್ಲಿ ಧೂಳು ಹೆಚ್ಚಳವಾಗಿದ್ದು, ದ್ವಿಚಕ್ರ ವಾಹನ ಸವಾರರು ಭಯದಲ್ಲೇ ಸಂಚರಿಸಬೇಕಾಗಿದೆ. ಇದರಿಂದ ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತವೆ. ಮಕ್ಕಳಿಗೆ ಕೆಮ್ಮು, ಶೀತ, ಅಲರ್ಜಿ ಸೇರಿದಂತೆ ಶ್ವಾಸಕೋಶ ಸಂಬಂಧಿ ರೋಗಗಳು ಹೆಚ್ಚುತ್ತಿವೆ. ಈ ಕೂಡಲೇ ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ, ನಗರಸಭೆ ಪೌರಾಯುಕ್ತರು ಗಮನ ಹರಿಸಬೇಕು. ಕೂಡಲೇ ಅನುದಾಣ ಬಿಡುಗಡೆ ಮಾಡಿ, ಗುಣಮಟ್ಟದ ರಸ್ತೆ ನಿರ್ಮಿಸುವ ಮೂಲಕ ಈ ಭಾಗದ ಜನರ ಬೇಡಿಕೆ ಈಡೇರಿಸಬೇಕು ಎಂದು ನಗರಸಭೆ ಮಾಜಿ ಸದಸ್ಯ ವೆಂಕಟೇಶ ಇಟಗಿ ಆಗ್ರಹಿಸಿದ್ದಾರೆ.