Haveri, MP Bommai, Congress, Cross Voting,  
ಹಾವೇರಿ

ಅಡ್ಡ ಮತದಾನ, ಸಮಿತಿ ವರದಿ ಬಂದ ಮೇಲೆ ಕ್ರಮ; ಕಾಂಗ್ರೆಸ್‌ನ ಹಣದ ಆಸೆಗೆ ನಮ್ಮ ಕೆಲ ಶಾಸಕರು ಬಲಿ * ಸಂಸದ ಬಸವರಾಜ ಬೊಮ್ಮಾಯಿ ಆರೋಪ

ಹಾವೇರಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆಗಿರುವುದು ಅತ್ಯಂತ ಆಘಾತಕಾರಿ ಹಾಗೂ ದುರ್ದೈವದ ಸಂಗತಿ. ಕಾಂಗ್ರೆಸ್ ಪೊಲಿಟಿಕಲ್ ಕರಪ್ಷನ್ ನಡೆಸಿದ್ದು, ಬಹಳ ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿದ್ದಾರೆ. ಹಣದ ಆಮಿಷಕ್ಕೆ ನಮ್ಮ ಕೆಲವು ಶಾಸಕರು ಬಲಿಯಾಗಿರುವುದು ನಿಜ. ಈ ಕುರಿತು ಪಕ್ಷ ನೇಮಿಸಿರುವ ಸಮಿತಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನದ ಕುರಿತ ವರದಿ ಒಂದು ವಾರದಲ್ಲಿ ಬರಲಿದ್ದು, ತಪ್ಪಿತಸ್ಥರ ವಿರುದ್ಧ ಹೈಕಮಾಂಡ್ ಕ್ರಮ ಜರುಗಿಸಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸರ್ಕಾರ ಹಣದ ದುರಹಂಕಾರದಿಂದ ಆಡಳಿತ ನಡೆಸುತ್ತಿದೆ. ಇದು ಪೊಲಿಟಿಕಲ್ ಕರಪ್ಷನ್, ಬಹಳ ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿದ್ದಾರೆ. ಹಣದ ಆಮಿಷಕ್ಕೆ ನಮ್ಮ ಕೆಲವು ಶಾಸಕರು ಬಲಿಯಾಗಿರುವುದು ನಿಜ. ಇಂಥ ತಪ್ಪುಗಳಾಗದಂತೆ ಮುಂದೆ ಎಚ್ಚರಿಕೆ ವಹಿಸುತ್ತೇವೆ ಎಂದರು.
ಬೇಡ್ತಿ- ವರದಾ, ಮೇಕೆದಾಟು ಡಿಪಿಆರ್ ಆಗಲಿ
ಮೇಕೆದಾಟು ವಿಚಾರವಾಗಿ ರಾಜ್ಯ ಸರ್ಕಾರ ಆದಷ್ಟು ಬೇಗ ಡಿಪಿಆರ್ ತಯಾರು ಮಾಡಿ ಅನುಮತಿ ಪಡೆಯಬೇಕು. ನೆಲ, ಜಲ, ಭಾಷೆ ವಿಚಾರದಲ್ಲಿ ನಾವೆಲ್ಲ ಒಂದಾಗಿದ್ದೇವೆ. ಅದಕ್ಕೆ ಸರ್ಕಾರ ಏನೆಲ್ಲ ಕ್ರಮ ತೆಗೆದುಕೊಳ್ಳುತ್ತದೆ ರಾಜ್ಯದ ಹಿತದೃಷ್ಟಿಯಿಂದ ಒಂದಾಗಿ ಕೆಲಸ ಮಾಡುತ್ತೇವೆ. ಸಿಎಂ ಡಿ.ಕೆ.ಶಿವಕುಮಾರ ತಮಿಳುನಾಡಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯಲಿ ಎಂದು ಆಗ್ರಹಿಸಿದರು. ಬೇಡ್ತಿ-ವರದಾ ಯೋಜನೆಗೆ ರಾಜ್ಯ ಸರ್ಕಾರ ಡಿಪಿಆರ್ ಮಾಡುತ್ತಿದೆ. ಅದನ್ನು ಮಾಡಿದ ನಂತರ ನಾವು ನಮ್ಮ ಹೋರಾಟ ಮತ್ತೆ ಮುಂದುವರೆಸುತ್ತೇವೆ ಎಂದರು.
ರೈಲು ನಿಲ್ದಾಣ ಸಮಸ್ಯೆಗೆ ಶೀಘ್ರ ಮುಕ್ತಿ
ಹಾವೇರಿ ರೈಲ್ವೆ ನಿಲ್ದಾಣದ ಪ್ರವೇಶದ ಸಮಸ್ಯೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಹಾವೇರಿ ರೈಲು ನಿಲ್ದಾಣ ಪ್ರವೇಶ ಸಮಸ್ಯೆ ಇದೆ. ಅಲ್ಲಿ ಖಾಸಗಿಯವರ ಜಾಗ ಇದೆ. ಇದು ಕೋರ್ಟ್‌ನಲ್ಲಿದೆ. ಮಾತುಕತೆ ಮೂಲಕ ಬಗೆಹರಿಸಲು ಯತ್ನಿಸಲಾಗಿದೆ. ಈಗಾಗಲೇ ಮೂರು ಬಾರಿ ಮಾತುಕತೆಯಾದರೂ ಫಲ ಸಿಕ್ಕಿಲ್ಲ. ಬರುವ ದಿನಗಳಲ್ಲಿ ಪ್ರಯತ್ನಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.
ದೊಡ್ಡ ಮಟ್ಟದ ಹೋರಾಟ
ಹಾವೇರಿ ಜಿಲ್ಲೆಯಲ್ಲಿ ಅಕ್ರಮ ದಂಧೆ, ಮರಳು ಮಾಫಿಯಾ ಜೋರಾಗಿ ನಡೆಯುತ್ತಿರುವುದನ್ನು ತಡೆಯಲು ಬಿಜೆಪಿ ಏನು ಮಾಡುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಡೀ ರಾಜ್ಯದಲ್ಲಿ ಭ್ರಷ್ಟಾಚಾರ ಇದೆ. ವರ್ಗಾವಣೆಯಿಂದ ಹಿಡಿದು ಆಡಳಿತದಲ್ಲಿ ಭ್ರಷ್ಟಾಚಾರ ಇದೆ. ಈಗಾಗಲೇ ನಾವು ಪ್ರತಿಭಟನೆ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಜಿಲ್ಲಾಡಳಿತದ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.