Haveri, Moulvi, Uluma Society, Conference,  
ಹಾವೇರಿ

ರಾಜ್ಯ ಮಟ್ಟದ ಮೌಲಾನಾಗಳ ಸಮ್ಮೇಳನ ಜೂ.14ರಂದು ; ಸೌಹಾರ್ದತೆ, ಸಂವಿಧಾನದ ಮೌಲ್ಯದ ಅರಿವು ಮೂಡಿಸುವ ಉದ್ದೇಶ

ಹಾವೇರಿ: ನಗರದ ರಜನಿ ಕನ್ವೆನ್ಷನ್ ಹಾಲ್‌ನಲ್ಲಿ ಜೂ.14ರಂದು ಬೆಳಗ್ಗೆ 9 ಗಂಟೆಗೆ ಮೌಲಾನಾಗಳ ರಾಜ್ಯಮಟ್ಟದ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳ ಕುರಿತು ಬೃಹತ್ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಉಲಮಾ ಸೊಸೈಟಿ ಕಾರ್ಯದರ್ಶಿ ಹಜರತ್‌ಅಲಿ ಸುಳ್ಳಳ್ಳಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಲುಮಾ ಅಂದರೆ ಧರ್ಮಗುರುಗಳು (ಮೌಲ್ವಿ) ಎಂದರ್ಥ. ಜಿಲ್ಲೆಯಲ್ಲಿ 400 ಸೇರಿ ರಾಜ್ಯದಲ್ಲಿ 900 ಉಲುಮಾಗಳು ಸೊಸೈಟಿ ಸದಸ್ಯರಿದ್ದಾರೆ. ಜಿಲ್ಲೆಯಿಂದಲೇ ಸೊಸೈಟಿ ಆರಂಭಿಸಲಾಗಿದ್ದು, ಅತಿ ಹೆಚ್ಚು ಮೌಲ್ವಿಗಳನ್ನು ಈ ಜಿಲ್ಲೆ ಹೊಂದಿದೆ. ಸಮಾಜದಲ್ಲಿನ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಸಮ್ಮೇಳನದಲ್ಲಿ ಜಾಗೃತಿ ಮೂಡಿಸಲಾಗುವುದು. ಶಿಕ್ಷಣ, ಸರ್ವಧರ್ಮದ ಸಮಭಾವ ಸಂದೇಶ ಸಾರುವುದು, ರಾಷ್ಟ್ರೀಯ ಏಕತೆ, ಸಂವಿಧಾನ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ, ಕಲುಬುರಗಿಯ ಹಜರತ್ ಖ್ವಾಜಾ ಬಂದೇನವಾಜಾ ದರ್ಗಾದ ಉಲಮಾ/ ಧರ್ಮಗುರು ಹಾಫೀಜ್ ಸೈಯದ್ ಮೊಹಮ್ಮದ್‌ಅಲಿ ಅಲ್‌ಹುಸೇನಿ ಸಜ್ಜದಾ ನಶೀನ್, ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್, ಸ್ಥಳೀಯ ಶಾಸಕರು, ಅಂಜುಮನ್ ಇಸ್ಲಾಂ ಸಮಿತಿ ಪದಾಧಿಕಾರಿಗಳು, ಇತರರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷ ಹಜರತ್ ಸೈಯದ್ ಮೈನುದ್ದೀನ್ ಸರಖಾಜಿ, ಉಪಾಧ್ಯಕ್ಷ ಮೌಲಾನಾ ಅಬ್ದುಲ್ ಅಲೀಮ್‌ಸಾಬ್, ಸದಸ್ಯರಾದ ಸೈಯದ್ ದಾದಾಪೀರ್, ಮೌಲಾನಾ ಇಬ್ರಾಹಿಂಸಾಬ್, ಹಾಫೀಜ್ ಸಾಕಮುಲ್ಲಾ, ಜಾಫರ್‌ರಜಾ, ಮಹ್ಮದ್ ರಿಜ್ವಾನ್, ಗುಲಾಮ್ ಮುಸ್ತಫಾ, ಇನಾಯತ್‌ಉಲ್ಲಾ, ರಹಮತ್‌ರಜಾ, ಜಹಿಮುದ್ದೀನ, ಹಾವೇರಿ ಅಂಜುಮನ್ ಕಮಿಟಿ ಸದಸ್ಯ ಜಮೀರ್ ಜಿಗರಿ, ಇತರರಿದ್ದರು.