Haveri, Moharam, Muslims, Phanja, Rally,
ಹಾವೇರಿ: ತ್ಯಾಗ ಹಾಗೂ ಶೋಕದ ಸಂಕೇತವಾದ ಮೊಹರಂ ಹಬ್ಬವನ್ನು ಮುಸ್ಲಿಮರ ನಗರದಲ್ಲಿ ಶನಿವಾರ ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸಿದರು.
ಬೆಳಗ್ಗೆಯಿಂದಲೇ ನಗರದ ವಿವಿಧ ಮಸೀದಿಗಳ ಬಳಿ ಅಲೈ ದೇವರು ಹಾಗೂ ಡೋಲಿಗಳ ಮೆರವಣಿಗೆ, ಅಗ್ನಿಕುಂಡ ಪ್ರವೇಶ ಕಾರ್ಯಕ್ರಮಗಳು ನಡೆದವು. ಸಂಜೆ ನಗರದ ಮೆಹಬೂಬ ಸುಬಾನಿ ದರ್ಗಾ, ದಾವಲ್ ಮಲ್ಲಿಕ್ ದರ್ಗಾ, ಅತ್ತಾರ್‌ಗಲ್ಲಿ, ಸುಭಾಸ್ ವೃತ್ತ, ಬೊರೆಶಾವಲ್ಲಿ ದರ್ಗಾ, ಕೊರವರ ಓಣಿ, ಸೂಲಮಟ್ಟಿ, ಟಿಪ್ಪು ನಗರ (ಮುಲ್ಲಾನಕೆರಿ), ಮನಿಯಾರ್ ಓಣಿ, ಗ್ಯಾರವಿ ದರ್ಗಾದ ಅಲೈ ದೇವರುಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪಾಂಜಾಗಳ ಅದ್ದೂರಿ ಮೆರವಣಿಗೆ ನಡೆಯಿತು.
ಮೆರವಣಿಗೆಯ ವೇಳೆ ಅಲೈ ದೇವರುಗಳಿಗೆ ಭಕ್ತರು ಸಕ್ಕರೆ, ಬೆಲ್ಲ, ಗೊಬ್ಬರಿ, ಸೇರಿದಂತೆ ನೈವೇದ್ಯ ಸಲ್ಲಿಸಿದರೆ ಇನ್ನೂ ಕೆಲವರು ಉತ್ತತ್ತಿ, ಬಾಳೆ ಹಣ್ಣು ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿಕೊಂಡರು. ಮುಸ್ಲಿಮರು ತಮ್ಮ ಆರಾಧ್ಯದೈವ ಅಲೈ ದೇವರ ಮೆರವಣಿಗೆಯಲ್ಲಿ ಮಕ್ಕಳಿಗೆ ಅಲೈ ದೇವರ ಆಶೀರ್ವಾದ ಪಡೆದುಕೊಂಡರು.
ಪ್ರತಿ ವರ್ಷದಂತೆ ಸಂಜೆ ನಗರದ ಸುಭಾಸ ವೃತ್ತದಲ್ಲಿ ಎಲ್ಲರೂ ಒಂದೆಡೆ ಸೇರಿ ಎಲ್ಲ ದೇವರಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ದೇವರನ್ನು ಹೊಳೆಗೆ ಕಳುಹಿಸಲಾಯಿತು. ಮೆರವಣಿಗೆಯಲ್ಲಿ ನೂರಾರು ಹಿಂದೂ-ಮುಸ್ಲಿಂಮರು ಭಾಗವಹಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.