ಹಾವೇರಿ: ಈ ಹಿಂದೆ ಇಂದಿರಾ ಗಾಂಧಿ, ರಾಜೀವ ಗಾಂಧಿ ಹೆಸರು ಬದಲಾಯಿಸಿದ್ದ ಬಿಜೆಪಿ ಈಗ ನರೇಗಾ ತಿದ್ದುಪಡಿ ಮೂಲಕ ಮಹಾತ್ಮ ಗಾಂಧೀಜಿ ಹೆಸರು ಬದಲಾಯಿಸಿದ್ದು ದುರಂತವೇ ಸರಿ. ನರೇಗಾ ಹೆಸರಿನ ಜತೆಗೆ ಗ್ರಾಮೀಣ ಜನರ ನೋವಿಗೆ ಸ್ಪಂದಿಸುವ ಸಾಮಾಜಿಕ ಭದ್ರತಾ ಕಾರ್ಯಕ್ರಮದ ರೂಪವನ್ನೇ ಬದಲಾಯಿಸಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷ ನರೇಗಾ ಯೋಜನೆ ಗುಣಗಾನ ಮಾಡುತ್ತಿದ್ದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಏಕಾಏಕಿ ಏನು ಜ್ಞಾನೋದಯ ಆಗಿದೆಯೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ನರೇಗಾ ಯೋಜನೆ ಹೆಸರು ಬದಲಾಯಿಸಿದೆ. ಇದನ್ನು ಖಂಡಿಸಿ ಈಗಾಗಲೇ ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್‌ನಿಂದ ಹೋರಾಟ ಶುರುವಾಗಿದೆ. ಈ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲು ಒತ್ತಾಯಿಸಲಾಗುತ್ತಿದೆ. ಈ ಕೂಡಲೇ ಬಿಜೆಪಿ ಈ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಫೆಬ್ರವರಿ 13ರಂದು ನಮ್ಮ ಸರ್ಕಾರ ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಾಧನಾ ಸಮಾವೇಶ ನಡೆಸಲಾಗುವುದು. ಒಂದು ಲಕ್ಷ ಜನರಿಗೆ ಪಟ್ಟಾ ಕೊಡುವ ಕಾರ್ಯಕ್ರಮ ನಡೆಯಲಿದೆ. ಸಮಾಜದ ಎಲ್ಲ ಧರ್ಮಗಳನ್ನು ಕಾಪಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.
ಅಧಿಕಾರ ಹಂಚಿಕೆ ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಲೀಂ, ಜ.28ರಿಂದ ಫೆ.2ರವರೆಗೆ ವಿಶೇಷ ಅಧಿವೇಶನ ಕರೆಯಲಾಗಿದೆ. ಆ ಸಮಯದಲ್ಲಿ ವಿಪಕ್ಷಗಳು ಸಮಯ ಹಾಳು ಮಾಡದೇ, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಫೆ.13ರಂದು ಹಾವೇರಿಯಲ್ಲಿ ಸಮಾವೇಶ ನಡೆಯುತ್ತದೆ. ಅಲ್ಲಿಯವರೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಬೇಡ್ತಿ- ವರದಾ ನದಿ ಜೋಡಣೆ ಹೋರಾಟಕ್ಕೆ ಬೆಂಬಲಿಸುವ ಕುರಿತು ಪಕ್ಷದಲ್ಲಿ ತೀರ್ಮಾನಿಸುತ್ತೇವೆ. ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರದ ಸಚಿವರು ಯಾರೂ ಸ್ಪಂದಿಸುತ್ತಿಲ್ಲ. ರಾಜಕಾರಣ ಬಿಟ್ಟು ಜನರ ಹಿತದೃಷ್ಟಿಯಿಂದ ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲಿ ಮಾತನಾಡುವ ಕೇಂದ್ರದ ಮಂತ್ರಿಗಳು ಕೇಂದ್ರ ನಾಯಕರ ಜತೆಗೆ ಮಾತನಾಡುವ ಧೈರ್ಯ ತೋರಲ್ಲ ಎಂದರು.
ಅಸಮಾಧಾನಿತರ ಬಗ್ಗೆ ಪಕ್ಷ ತೀರ್ಮಾನಿಸುತ್ತೆ
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಹೊರಗಿನಿಂದ ಬಂದವರಿಗೆ ಕೊಟ್ಟಿದ್ದು ಮೂಲ ಕಾಂಗ್ರೆಸ್‌ನವರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಮೋಹನ ಲಿಂಬಿಕಾಯಿ, ವಿರೋಧಿಸುವ ಕೆಲವರೂ ಬೇರೆ ಪಕ್ಷಕ್ಕೆ ಹೋಗಿ ಬಂದವರಲ್ಲವೇ ಎಂದು ಮರುಪ್ರಶ್ನಿಸಿದರು. ನಮ್ಮ ಪಕ್ಷದ ನಾಯಕರು ಎಲ್ಲವನ್ನೂ ಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಸಮಾಧಾನಿತರಿಗೆ ಸಮಾಧಾನ ಮಾಡುತ್ತಾರೆ ಎಂದರು.