mlc saleem ahmed  
ಹಾವೇರಿ

ಮೋದಿ, ಶಾ ಸರ್ವಾಧಿಕಾರಿ ಧೋರಣೆ ಸಲ್ಲ; ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್

ಹಾವೇರಿ: ಮನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿ ಹೆಸರು ಬದಲಾಯಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ದೇಶಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧೀಜಿ ಅವರನ್ನು ಜನರಿಂದ ಬಿಜೆಪಿ ದೂರ ಮಾಡುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿಯವರು ಜವಾಹರಲಾಲ ನೆಹರು, ಇಂದಿರಾ ಗಾಂಧಿ, ರಾಜೀವಗಾಂಧಿ ಅವರ ಹೆಸರನ್ನು ತೆಗೆದರು. ಕೊನೆಗೆ ಗಾಂಧೀಜಿಯವರನ್ನು ದೂರ ಮಾಡುತ್ತಿದ್ದಾರೆ. ಏಕೆ ಗಾಂಧೀಜಿ ಅವರ ಸಿದ್ದಾಂತಗಳನ್ನು ಒಪ್ಪುತ್ತಿಲ್ಲ, ಈ ಬಗ್ಗೆ ಬಿಜೆಪಿ ಶಾಸಕರನ್ನೇ ಕೇಳಿದರೂ ಅವರ ಬಳಿಯೂ ಉತ್ತರವಿಲ್ಲ, ಈ ಬಗ್ಗೆ ದೇಶಾದ್ಯಂತ ಜ.5ರಿಂದ ಹೋರಾಟ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ ಸರ್ಕಾರ ಕೇರಳ ನಿರಾಶ್ರಿತರಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದೆ. ರಾಜ್ಯದಲ್ಲಿ ಎಲ್ಲಿಯೇ ಆಗಲಿ ಇಂತಹ ಘಟನೆಗಳು ನಡೆದರೆ ಅವರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕೆಲವುರು ರಾಜಕಾರಣಿಗಳು ಇದನ್ನು ಅಸ್ತ್ರವಾಗಿ ನೋಡುತ್ತಿದ್ದಾರೆ ಎಂದರು.
ಜ.15ಕ್ಕೆ ಸಂಕ್ರಾಂತಿ ಇದೆ. ಹಬ್ಬ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಯ ಚರ್ಚೆಯಾಗಬಹುದು. ಬರುವ ದಿನಗಳಲ್ಲಿ ಸಂಪುಟ ವಿಸ್ತರಣೆಯಲ್ಲಿ ನನಗೂ ಸಚಿವ ಸ್ಥಾನದ ಅವಕಾಶ ಸಿಗಬಹುದು. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಬಿಜೆಪಿಯವರು ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಮಾತನಾಡದೇ, ಈಗ ಹಾದಿ ಬೀದಿಯಲ್ಲಿ ಮಾತನಾಡುತ್ತಾರೆ. ಬದ್ದತೆ ಇದ್ದಿದ್ದರೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕಿತ್ತು ಎಂದರು.