ಹಾವೇರಿ: ರಾಜ್ಯದಲ್ಲಿ ಸುಮಾರು 29 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಿಕ್ಷಕರಿಲ್ಲದೇ ಪಾಠ, ಕಲಿಕೆ ಹೇಗೆ ನಡೆಯಬೇಕು. ಈ ಕುರಿತು ಶಿಕ್ಷಣ ಇಲಾಖೆ ಸಚಿವರು ಹಾಗೂ ಅಧಿಕಾರಿಗಳ ಸಭೆ ಕರೆದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಅಧಿವೇಶನಕ್ಕೂ ಮುನ್ನ ವಿಶೇಷ ಸಭೆ ಕರೆದು ಚರ್ಚಿಸಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಸಮರ್ಪಕ ಶಿಕ್ಷಕರೇ ಇಲ್ಲದೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೇಗೆ ಫಲಿತಾಂಶ ನಿರೀಕ್ಷಿಸುತ್ತೀರಿ. ಫಲಿತಾಂಶ ಕೇಳುವ ನೈತಿಕತೆಯೂ ಈ ಸರ್ಕಾರಕ್ಕೆ ಇಲ್ಲ. ಕೇರಳ ಮಾದರಿಯಲ್ಲಿ ಕನಿಷ್ಠ ಪ್ರಾಥಮಿಕ ಶಾಲೆಗೆ ಒಂದು ತರಗತಿಗೆ ಒಬ್ಬ ಶಿಕ್ಷಕರನ್ನಾದರೂ ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ತಿಳಿಸುತ್ತೇನೆ ಎಂದರು.
ಓಪಿಎಸ್ ಬಗ್ಗೆ ಮಾತನಾಡಿದ ಅವರು ಬೇರೆ ರಾಜ್ಯಗಳಲ್ಲಿ ಓಪಿಎಸ್ ಕೊಡುವುದಾಗಿ ಅಲ್ಲಿನ ಸರ್ಕಾರ ನಿರ್ಧರಿಸಿವೆ. ನಮ್ಮಲ್ಲಿಯೂ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಓಪಿಎಸ್ ಕೊಡುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಸದ್ಯದ ಹಣಕಾಸಿನ ಪರಿಸ್ಥಿತಿಯಲ್ಲಿ ಕೊಡದೇ ಇರಬಹುದು. ಮುಂದಿನ ಏಳೆಂಟು ತಿಂಗಳಲ್ಲಿ ಓಪಿಎಸ್ ಕೊಡಬಹುದು ಎಂದರು.
ಜನಗಣಮನ ಮೊದಲು ವಂದೇ ಮಾತರಂ ಹೇಳಬೇಕು ಎಂಬ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಕೇಂದ್ರ ಸರ್ಕಾರದ ಆದೇಶ. ಅದರ ಬಗ್ಗೆ ನಾವೇನೂ ಹೇಳುವುದಿಲ್ಲ ಎಂದರು.
ವೈಯಕ್ತಿಕ ವಿದೇಶ ಪ್ರವಾಸಕ್ಕೆ ತಕರಾರು ಇಲ್ಲ
ಐದು ಎಂಎಲ್‌ಸಿ ಸೇರಿದಂತೆ ಒಟ್ಟಾರೆ 22 ಜನ ಶಾಸಕರು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆಂದು ಮಾಧ್ಯಮಗಳಲ್ಲಿ ನೋಡಿದೆ. ಶಾಸಕರು ಹೋಗುತ್ತಿರುವುದು ಅವರ ವೈಯಕ್ತಿಕ ದುಡ್ಡು ಖರ್ಚು ಮಾಡುಕೊಂಡು ಹೋಗುತ್ತಿದ್ದಾರೆ. ಅದಕ್ಕೆ ನಮ್ಮ ತಕರಾರು ಇಲ್ಲ. ಸರ್ಕಾರದಿಂದ ಶಾಸಕರು ವಿದೇಶ ಪ್ರವಾಸಕ್ಕೆ ಹೊರಟರೆ ನಮ್ಮ ಅನುಮತಿ ಪಡೆದುಕೊಂಡು ಹೋಗಬೇಕಾಗುತ್ತದೆ. ಆದರೆ, ಕೆಲ ಶಾಸಕರು ವೈಯಕ್ತಿಕ ಹಣ ಖರ್ಚು ಮಾಡಿಕೊಂಡು ಹೋದರೆ ಅದಕ್ಕೆ ಅನುಮತಿ ಬೇಕಿಲ್ಲ. ಸದ್ಯ ಭೋಜೇಗೌಡ ಎಂಬುವವರು ದಕ್ಷಿಣ ಆಫ್ರಿಕಾಗೆ ಹೊರಟಿರುವ ಬಗ್ಗೆ ನಮ್ಮನ್ನ ಅನುಮತಿ ಕೇಳಿದ್ದಾರೆ. ಹೀಗಾಗಿ ನಾವೂ ಕಾರ್ಯದರ್ಶಿಗೆ ಕಡತ ಮಂಡಿಸಿ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ಫೈಲ್ ಬಂದ ಮೇಲೆ ತೀರ್ಮಾನ ಮಾಡುತ್ತೇನೆ ಎಂದರು ಸಭಾಪತಿ ಹೊರಟ್ಟಿ.