Haveri, MLAs, Hubli, Moda Bittane, Cloud Seedings,
ಹಾವೇರಿ: ಜಿಲ್ಲೆಯ ಹಾನಗಲ್ಲ, ಸವಣೂರು, ಹಾವೇರಿ ಹಾಗೂ ರಾಣೆಬೆನ್ನೂರು ತಾಲೂಕುಗಳಲ್ಲಿ ಸೋಮವಾರ ಮೋಡ ಬಿತ್ತನೆ ಮಾಡಿದ್ದು, ಈ ಭಾಗದಲ್ಲಿ ಹೆಚ್ಚಿನ ಮಳೆ ಸುರಿದಿದೆ ಎಂದು ಮೋಡ ಬಿತ್ತನೆಯ ರೂವಾರಿ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯ ಹಲವೆಡೆ ಬೆಳಗ್ಗೆಯಿಂದ ಸಣ್ಣ ಪ್ರಮಾಣದ ಮಳೆ ಆಗುತ್ತಿತ್ತು. ಮಧ್ಯಾಹ್ನದ ನಂತರ ಮೋಡ ಬಿತ್ತನೆ ಮಾಡಿರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಬಿರುಸಾದ ಮಳೆ ಸುರಿದಿದೆ. ಈ ಕುರಿತು ಜನರೇ ವಿಡಿಯೋಗಳನ್ನು ಮಾಡಿ ಹರಿಬಿಟ್ಟಿದ್ದಾರೆ. ಹಲವರು ಕರೆ ಮಾಡಿ ತಿಳಿಸಿದ್ದಾರೆ.
ಜುಲೈ 30ರವರೆಗೆ ಮೋಡ ಬಿತ್ತನೆ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇರಲಿದೆ. ಜು.8ರಿಂದ 16ರವರೆಗೆ ಮೋಡಗಳ ಲಭ್ಯತೆ ಇರುವುದಿಲ್ಲ ಎಂದು ಹವಾಮಾನ ವಿಜ್ಞಾನಿಗಳು ತಿಳಿಸಿದ್ದಾರೆ. ನಾಳೆ ಮೋಡಗಳ ಲಭ್ಯತೆ ಇರಲಿದ್ದು, ನಾಳೆ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮುಂದುವರಿಸಲಾಗುವುದು. ನಂತರ ವಿಜ್ಞಾನಿಗಳ ಸಲಹೆ ಮೇರೆಗೆ ಬಿತ್ತನೆ ಮಾಡಲಾಗುವುದು.
ಮೈಸೂರು, ಹಾಸನ, ಬಾಗಲಕೋಟೆ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಶಾಸಕರಿಂದಲೂ ಮೋಡ ಬಿತ್ತನೆಗೆ ಬೇಡಿಕೆ ಬಂದಿದೆ. ಮೋಡಗಳ ಲಭ್ಯತೆ ನೋಡಿಕೊಂಡು ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ‘ವಿಜಯವಾಣಿ’ಗೆ ತಿಳಿಸಿದರು.
ಮೋಡ ಬಿತ್ತನೆ ಕುರಿತು ಮುಖ್ಯಮಂತ್ರಿಗಳ ಜತೆಯೂ ಚರ್ಚಿಸಿದ್ದೇನೆ. ಆದರೆ ಸರ್ಕಾರದ ಮಟ್ಟದಲ್ಲಿ ಟೆಂಡರ್ ಕರೆದು, ಅನುಮತಿ ಪಡೆಯುವಷ್ಟರಲ್ಲಿ ಮೋಡಗಳ ಲಭ್ಯತೆ ಸಿಗುವುದು ಕಷ್ಟಕರ. ಹಾಗಾಗಿ, ಹಾವೇರಿ ಜಿಲ್ಲೆಯ ಆರು ಶಾಸಕರು ಸೇರಿ, ಸ್ವಂತ ಖರ್ಚಿನಿಂದ ರೈತರ ಒಳಿತಿಗಾಗಿ, ಜಿಲ್ಲೆಯಲ್ಲಿ ತುರ್ತಾಗಿ ಮೋಡ ಬಿತ್ತನೆ ಆರಂಭಿಸಿದ್ದೇವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಡಿಸಿ ಅನುಮತಿ ಪಡೆಯುವ ಕುರಿತು ಗೊಂದಲ ಸೃಷ್ಟಿಯಾಗಿತ್ತು. ‘ಡಿಜಿಸಿಎ ಅನುಮತಿ ನೀಡಿದ್ದು, ಡಿಸಿ ಅವರಿಗೆ ಮಾಹಿತಿ ನೀಡಬೇಕಿತ್ತು, ಮಾಹಿತಿ ನೀಡಿದ್ದೇವೆ’ ಎಂದು ಶಾಸಕ ಕೋಳಿವಾಡ ಹೇಳಿದರು. ಈ ನಡುವೆ ಶಾಸಕರು, ಮೋಡ ಬಿತ್ತನೆ ಮಾಡಿದ್ದು ಒಳ್ಳೆಯ ಕೆಲಸವೇ. ಆದರೆ, ಬಿತ್ತನೆ ಮಾಡಿದ ಪ್ರದೇಶದಲ್ಲಿ ಮೋಡ ಬಿತ್ತನೆಯಿಂದಲೇ ಮಳೆ ಸುರಿದಿದೆ ಎಂಬುದಕ್ಕೆ ವೈಜ್ಞಾನಿಕ ದಾಖಲೆಗಳನ್ನು ಒದಗಿಸಿದರೆ ಸೂಕ್ತ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.