Haveri, MLA, Rudrappa lamani, Fertilizers, Seeds, Shop, Owners Meet, 
ಹಾವೇರಿ

ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿ; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; ಕೃಷಿ ಪರಿಕರ ಮಾರಾಟಗಾರರಿಗೆ ಶಾಸಕ ರುದ್ರಪ್ಪ ಲಮಾಣಿ ಎಚ್ಚರಿಕೆ

ಹಾವೇರಿ: ಹಾವೇರಿ ತಾಲೂಕು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿನ ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಪೂರೈಸುವುದು ಪ್ರತಿಯೊಬ್ಬ ಮಾರಾಟಗಾರರ ಮತ್ತು ತಾಲೂಕು ಆಡಳಿತದ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕಿನ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಪ್ರಸ್ತುತ 1,594 ಟನ್ ಯೂರಿಯಾ ರಸಗೊಬ್ಬರ ದಾಸ್ತಾನು ಇದೆ. 758 ಟನ್ ಡಿ.ಎ.ಇ., 167 ಟನ್ ಪೊಟ್ಯಾಶ್, 2,394 ಟನ್ ಕಾಂಪ್ಲೆಕ್ಸ್ ರಸಗೊಬ್ಬರ ಇದೆ. ಒಟ್ಟು ತಾಲೂಕಿನಲ್ಲಿ ಪ್ರಸ್ತುತ ಒಟ್ಟು 5,079 ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಾರಾಟಗಾರರು ರೈತರ ಆಧಾರ್ ಸಂಖ್ಯೆ ಪಡೆದು ಕಡ್ಡಾಯವಾಗಿ ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರದ ಮೂಲಕವೇ ರಸಗೊಬ್ಬರ ಮಾರಾಟ ಮಾಡಬೇಕು. ಕೇವಲ ಅಧಿಕೃತ ಸ್ಥಳಗಳಲ್ಲಿ ಮಾತ್ರ ದಾಸ್ತಾನು ಮಾಡಬೇಕು. ಅನಧಿಕೃತ ಜಾಗದಲ್ಲಿ ದಾಸ್ತಾನು ಪತ್ತೆಯಾದಲ್ಲಿ ತಕ್ಷಣವೇ ಜಪ್ತಿ ಮಾಡಲಾಗುವುದು. ಕಳಪೆ ಬೀಜ ಅಥವಾ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ರಸಗೊಬ್ಬರ ಮತ್ತು ಬಿತ್ತನೆ ಬೀಜಗಳು ಅಗತ್ಯ ವಸ್ತುಗಳಾಗಿವೆ. ಇವುಗಳ ವಿತರಣೆಯಲ್ಲಿ ಯಾವುದೇ ಅಕ್ರಮ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗೋವಿಂದ ನಾಯಕ, ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್., ರುದ್ರಪ್ಪ ಹಾದಿಮನಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೃಷಿ ಪರಿಕರಗಳ ಮಾರಾಟಗಾರರು ಉಪಸ್ಥಿತರಿದ್ದರು.
"

ಬೀಜ, ಗೊಬ್ಬರ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ವಿವರ ಹಾಗೂ ಎಂಆರ್‌ಪಿ (ಗರಿಷ್ಠ ಮಾರಾಟ ದರ) ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ರೈತರಿಗೆ ರಸಗೊಬ್ಬರ ನೀಡಿದ ನಂತರ ಕಡ್ಡಾಯವಾಗಿ ಅಧಿಕೃತ ರಸೀದಿ ನೀಡಬೇಕು.