Shivanand Patil 
ಹಾವೇರಿ

ಸಿಎಂ, ಡಿಸಿಎಂ ಸ್ವಾಗತಕ್ಕೆ ಯಾಲಕ್ಕಿ ನಗರ ಸಜ್ಜು; ಮೆಡಿಕಲ್ ಕಾಲೇಜು ಕಟ್ಟಡ ಉದ್ಘಾಟನೆ ವೇದಿಕೆ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ

ಹಾವೇರಿ: ಹಾವೇರಿ ಮೆಡಿಕಲ್ ಕಾಲೇಜ್ ಕ್ಯಾಂಪಸ್ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಜ.7ರಂದು ನಡೆಯಲಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ವೇದಿಕೆ ಸಿದ್ಧಪಡಿಸಲಾಗಿದ್ದು, ಸಿಎಂ, ಡಿಸಿಎಂ ಸೇರಿ ಗಣ್ಯರ ಸ್ವಾಗತಕಕ್ಕೆ ಯಾಲಕ್ಕಿ ನಗರಿ ಸಜ್ಜಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಂಗಳವಾರ ಮೆಡಿಕಲ್ ಕಾಲೇಜ್ ಆವರಣದಲ್ಲಿ ಕಾರ್ಯಕ್ರಮದ ವೇದಿಕೆಯ ಸಿದ್ಧತೆಯನ್ನು ಪರಿಶೀಲಿಸಿದರು. ಆವರಣದಲ್ಲಿ ಸುಮಾರು ಆರು ಎಕರೆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದೆ. ಸಿಎಂ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಹುಕ್ಕೇರಿ ಮಠಕ್ಕೂ ತೆರಳಿ ಶ್ರೀ ಸದಾಶಿವ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದರು. ನೂತನ ಅತಿಥಿ ಗೃಹ ಪರಿಶೀಲಿಸಿದರು.
ವೇದಿಕೆಯಲ್ಲಿ ಗೊಂದಲಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಆಗಬಾರದು. ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ವೇದಿಕೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಸೇರದಂತೆ ಹಾಗೂ ಕಾರ್ಯಕ್ರಮದ ಶಿಸ್ತಿಗೆ ಭಂಗವಾಗದಂತೆ ನೋಡಿಕೊಳ್ಳಬೇಕು. ಇಲ್ಲಿನ ವ್ಯವಸ್ಥೆ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಸೂಚಿಸಿದರು.
ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್, ಎಸ್‌ಪಿ ಯಶೋಧಾ ವಂಟಗೋಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಹಿಮ್ಸ್ ಆರ್ಥಿಕ ಸಲಹೆಗಾರ ಡಾ.ದಿನೇಶ ಕೆ.ಎಸ್., ಪ್ರಾಂಶುಪಾಲ ಡಾ.ಆಶಾಕಿರಣ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
56 ಎಕರೆ, ಸುಸಜ್ಜಿತ ಮೂಲಸೌಕರ್ಯ
ಹಾವೇರಿ ಹೊರವಲಯದಲ್ಲಿ ಸುಮಾರು 56 ಎಕರೆ ಪ್ರದೇಶದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕ್ಯಾಂಪಸ್ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಏಕಕಾಲಕ್ಕೆ ಹಾವೇರಿ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಾಗಿದ್ದು, ಅವುಗಳಲ್ಲಿ ಪೂರ್ಣಪ್ರಮಾಣದಲ್ಲಿ ನಿರ್ಮಾಣವಾಗಿರುವ ಹೆಗ್ಗಳಿಕೆಯನ್ನು ಹಿಮ್ಸ್ ಹೊಂದಿದೆ.
ಮೊದಲ ವರ್ಷದ ಪದವಿಯ ಪರೀಕ್ಷೆಯನ್ನು ಸ್ವಂತ ಕಟ್ಟಡದಲ್ಲೇ ನಡೆಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಲೇಜ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಮಗಾರಿ ಆರಂಭಿಸಲಾಗಿದ್ದು, ಆಡಳಿತ ವಿಭಾಗ, ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್, ಸಿಬ್ಬಂದಿ ವಸತಿ ಗೃಹಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಮಾಡಲಾಗಿದೆ.
ವಾರ್ಷೀಕ 150 ವಿದ್ಯಾರ್ಥಿಗಳಂತೆ ಈಗ ಒಟ್ಟು 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2025-26ನೇ ಸಾಲಿನಲ್ಲಿ ಫಿಜಿಯಾಲಜಿ, ಬಯೋ ಕೆಮಿಸ್ಟ್ರಿ, ಫೋರೆನ್ಸಿಕ್ ಮೆಡಿಸಿನ್, ಜನರಲ್ ಮೆಡಿಸಿನ್ ಹಾಗೂ ಗೈನಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಅನುಮತಿ ನೀಡಿದೆ. ವೈದ್ಯಕೀಯ ಕಾಲೇಜ್‌ನೊಂದಿಗೆ ನರ್ಸಿಂಗ್ ಕಾಲೇಜ್‌ನ್ನು ಜೋಡಿಸಲಾಗಿದ್ದು, ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ನರ್ಸಿಂಗ್ ಮಂಡಳಿಯಲ್ಲಿ 40 ಬಿಎಸ್ಸಿ ವಿದ್ಯಾರ್ಥಿಗಳು, 40 ಜಿಎನ್‌ಎಂ ನರ್ಸಿಂಗ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಡೀನ್ ಡಾ.ಪ್ರದೀಪಕುಮಾರ ತಿಳಿಸಿದ್ದಾರೆ.
"

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹಾವೇರಿ ಜಿಲ್ಲೆ ಪ್ರವಾಸ ಕೈಗೊಂಡು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಗತಿ ಪರಿಶೀಲನೆ ನಡೆಸಿದ್ದರು. ಈಗ ದೇವರಾಜ ಅರಸು ಅವರ ದೀರ್ಘಾವಧಿ ಆಡಳಿತದ ದಾಖಲೆಯನ್ನು ದಾಟಿದ ದಿನವೇ ಹಾವೇರಿಗೆ ಆಗಮಿಸಿ ಸರ್ಕಾರಿ ವೈದ್ಯಕೀಯ ಕಾಲೇಜ್ ಉದ್ಘಾಟನೆ ಮಾಡುತ್ತಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜಿನ ಕನಸು ನನಸಾಗಿದೆ.