Minister, Shivanand Patil, Meeting,
ಹಾವೇರಿ: ಹಾನಗಲ್ಲ ತಾಲೂಕಿನ ಹಾಲಿನ ಪೌಡರ್ ಹಗರಣದಲ್ಲಿ ಅಧಿಕಾರಿಗಳನ್ನು ಕೇವಲ ವರ್ಗಾವಣೆ ಮಾಡಿದರೆ ಸಾಲದು, ಅಮಾನತು ಅಥವಾ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನ ದೇವಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಭೆಯಲ್ಲಿ ಅಂಗನವಾಡಿ ಸಂಘಟನೆಯ ಮುಖಂಡರ ಆರೋಪದ ಕುರಿತು ಅವರು ಮಾತನಾಡಿದರು. ಮೂರು ತಿಂಗಳವರೆಗೆ ಹಲವು ಅಂಗನವಾಡಿಗಳಿಗೆ ಹಾಲಿನ ಪೌಡರ್ ಸರಬರಾಜು ಮಾಡದವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಚಿವರು ಪ್ರಶ್ನಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೇವತಿ ಹೊಸಮಠ, ಆಗಸ್ಟ್ 2025ರಲ್ಲಿ ನಡೆದ ಪ್ರಕರಣ ಇದು. ನಾನು ನಂತರದಲ್ಲಿ ಈ ಹುದ್ದೆಗೆ ಹಾಜರಾಗಿರುವೆ. ಅಂಗನವಾಡಿಗಳಿಗೆ ಪೌಡರ್ ಹೋಗಿಲ್ಲ. ತನಿಖೆ ಪೂರ್ಣವಾಗಿ ವರದಿ ಸಲ್ಲಿಸಲಾಗಿದೆ. ಹಾನಗಲ್ಲ ಸಿಡಿಪಿಒ ಸೇರಿ ನಾಲ್ವರ ವರ್ಗಾವಣೆಯಾಗಿದೆ. ಇಲಾಖಾ ತನಿಖೆ ನಡೆದಿದೆ ಎಂದರು. ವರ್ಗಾವಣೆ ಸಾಕಾಗಲ್ಲ. ಸರ್ಕಾರದದ ಹಂತದಲ್ಲಿ ಕಟ್ಟುನಿಟ್ಟಿನ ಕ್ರಮ ಆಗುವಂತೆ ನೋಡಿಕೊಳ್ಳಿ ಎಂದು ಡಿಸಿ ಅವರಿಗೆ ಸಚಿವರು ಸೂಚಿಸಿದರು.
ಅಂಗನವಾಡಿ ಯೂನಿಯನ್ ಅಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ ಮಾತನಾಡಿ, ಮಾತೃಪೂರ್ಣ ಯೋಜನೆಯಡಿ ತಿಂಗಳಿಗೆ ಒಂದು ಅಂಗನವಾಡಿಗೆ ನಾಲ್ಕು ಸಿಲಿಂಡರ್ ಪೂರೈಸಲಾಗುತ್ತಿದೆ. ಗುತ್ತಲ, ಶಾಖಾರ ಭಾಗದ ಅಂಗನವಾಡಿಗಳಿಗೆ ಸಿಲಿಂಡರ್ ಪೂರೈಸುತ್ತಿಲ್ಲ. ಕಾರ್ಯಕರ್ತೆಯರೇ ಏಜೆನ್ಸಿಗಳಿಗೆ ಹೋಗಿ ಸಿಲಿಂಡರ್ ತರುತ್ತಿದ್ದಾರೆ. ಇದರಿಂದ 200, 300 ರೂ. ತಮ್ಮ ಕೈಯಿಂದ ಭರಿಸಬೇಕಾಗಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್‌ಒ, ಸೇರಿದಂತೆ ವಿವಿಧ ಕೆಲಸಗಳ ಹೊರೆಯಾಗಿದೆ. ಇದರಿಂದ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಲಾಖೆಯಿಂದಲೇ ಅಂಗನವಾಡಿಗಳಿಗೆ ಟಿವಿ, ಆಟಿಕೆ ಸಾಮಾನು, ಸೇರಿ ಇತರ ವಸ್ತುಗಳು ನೇರವಾಗಿ ಅಂಗನವಾಡಿಗೆ ಸರಬರಾಜು ಮಾಡಬೇಕು. ಇದರಿಂದಲೂ ಕಾರ್ಯಕರ್ತೆಯರಗೆ ಹೊರೆಯಾಗುತ್ತಿದೆ ಎಂದರು.
ಮಹಿಳಾ ಇಲಾಖೆ ಡಿಡಿ ರೇವತಿ ಹೊಸಮಠ ಮಾತನಾಡಿ, ಹಾವೇರಿ ತಾಲೂಕಿನಲ್ಲಿ ಮಾತ್ರ ಸಿಲಿಂಡರ್ ಪೂರೈಕೆ ಸಮಸ್ಯೆಯಾಗಿದೆ. ಟಿವಿ, ಇತರ ಸಾಮಗ್ರಿಗಳನ್ನು ಗುತ್ತಿಗೆದಾರರು ಸಿಡಿಪಿಒ ಕಚೇರಿಗೆ ತಲುಪಿಸುವಂತೆ ಆದೇಶವಿದೆ ಎಂದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸಿಲಿಂಡರ್ ಸಮಸ್ಯೆಗೆ ಬೇರೆ ತಾಲೂಕಿನಲ್ಲಿ ಇರುವಂತೆ ಏಜೆನ್ಸಿಗಳಿಂದ ಸರಬರಾಜು ಶುಲ್ಕ ಭರಿಸಿ, ನೇರವಾಗಿ ಸರಬರಾಜು ಮಾಡಿಸಿ. ಸಾಮಗ್ರಿಗಳನ್ನು ನೇರವಾಗಿ ಅಂಗನವಾಡಿಗಳಿಗೆ ತಲುಪಿಸಲು ರುದ್ರಪ್ಪ ಲಮಾಣಿ ಅವರಿಗೆ ಮನವಿ ಪತ್ರ ಕೊಡಿ. ಅವರೇ ಪಿಟಿಷನ್ ಕಮಿಟಿ ಅಧ್ಯಕ್ಷರಿದ್ದು, ಬಗೆಹರಿಸುತ್ತಾರೆ. ತೊಗರಿಬೇಳೆಗೆ ಸರ್ಕಾರ 110 ರೂ. ಕೊಡುತ್ತದೆ. ಗುಣಮಟ್ಟದ ಬಗ್ಗೆ ಅಕ್ಷರ ದಾಸೋಹ ಎಡಿಗಳು ಭೇಟಿ ನೀಡಿ ಪರಿಶೀಲಿಸಿ ಎಂದು ಸೂಚಿಸಿದರು.
ಡಿಸಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ನಾವು ಎಲ್ಲವನ್ನೂ ಮಾಡಬೇಕು. ಒಬ್ಬ ಬಿಎಲ್ಒಗೆ ಒಂದು ಸಾವಿರ ಜನ ಇರುತ್ತಾರೆ. ಸ್ಥಳೀಯವಾಗಿ ಇರುವ ಬಿಎಲ್‌ಒಗೆ ಎಲ್ಲ ಜನರ ಪರಿಚಯ ಇರುತ್ತದೆ. ಯಾರು ಕೆಲಸ ಮಾಡಲ್ಲ ಅವರಿಗೆ ಮಾತ್ರ ಸಮಸ್ಯೆ ಇದೆ. ಹಲವರು ಚೆನ್ನಾಗಿ ಮಾಡುತ್ತಿದ್ದಾರೆ ಎಂದರು.
ಶಾಸಕ ರುದ್ರಪ್ಪ ಲಮಾಣಿ, ಎಸ್‌ಪಿ ಯಶೋಧಾ ವಂಟಗೋಡಿ, ಇತರರಿದ್ದರು.
ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಐಎಎಸ್‌ಗಿಂತ ಕಠಿಣವಾದದ್ದು. ಇದು ಸುಲಭದ ಕೆಲಸವಲ್ಲ. ಆದರೂ, ಈ ಬಾರಿ ರಾಜ್ಯದಲ್ಲೇ ಮೊದಲು ನಮ್ಮ ಜಿಲ್ಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಡಿಸಿ ಮಾರ್ಮಿಕವಾಗಿ ವಿವರಿಸಿದರು.
ಸೀರೆ ಖರೀದಿ ಅವ್ಯವಹಾರ ಪ್ರಸ್ತಾಪ
ಸವಣೂರು ತಾಲೂಕಿನಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಶಾಸಕರ ಮೌಖಿಕ ಆದೇಶದ ಮೇರೆಗೆ, ತಾಲೂಕಿನ 89 ಶಾಲೆಗಳ ಬಿಸಿಯೂಟ ನೌಕರರಿಗೆ ನಿಯಮಬಾಹಿರವಾಗಿ ತರಕಾರಿಗಾಗಿ ಮೀಸಲಿಟ್ಟ ಸಾದಿಲ್ವಾರು ಹಣದಲ್ಲಿ ಸೀರೆ, ಏಫ್ರಾನ್, ತಲೆಗವಸು ಕೊಟ್ಟಿದ್ದಾರೆ. ಒಂದು ಸೆಟ್‌ಗೆ 2,500 ರೂ. ಖರ್ಚು ತೋರಿಸಿದ್ದಾರೆ. ಸೀರೆ ಖರೀದಿಸಲು ಅವಕಾಶವೇ ಇಲ್ಲದಿದ್ದರೂ ಅಕ್ರಮವಾಗಿ ಖರೀದಿಸಿದ್ದಾರೆ. ಜಿಪಂ ಉಪ ಕಾರ್ಯದರ್ಶಿ ತನಿಖೆ ಮಾಡಿದರೂ 9 ತಿಂಗಳಾದರೂ ಯಾವುದೇ ಕ್ರಮ ಜರುಗಿಸಲಿಲ್ಲ. ಹೋರಾಟಕ್ಕೆ ಬೆಲೆಯೇ ಇಲ್ಲವೇ ಎಂದು ಹೊನ್ನಪ್ಪ ಮರಿಯಮ್ಮನವರ ದೂರಿದರು.
ಜಿಪಂ ಉಪಕಾರ್ಯದರ್ಶಿ ಡಾ.ಪುನೀತ್ ಮಾತನಾಡಿ, ತನಿಖೆ ಮಾಡಿದ್ದು, 2.22 ಲಕ್ಷ ಹಣ ಟೆಂಡರ್‌ದಾರರಿಗೆ ನೀಡಲಾಗಿದೆ. ತಲೆಗವಸು, ಏಫ್ರಾನ್ ಖರೀದಿಗೆ ಅವಕಾಶವಿದೆ. ಎಸ್‌ಡಿಎಂಸಿ ಅನುಮತಿ ಮೇರೆಗೆ ಸೀರೆ ಖರೀದಿಸಿದ್ದಾಗಿ ಎಲ್ಲ ಶಾಲೆಗಳಿಂದ ಪತ್ರ ಬಂದಿದೆ. ಏಫ್ರಾನ್, ತಲೆಗವಸು ಗುಣಮಟ್ಟ ಸರಿಯಿಲ್ಲ. ಸೀರೆಯ ಗುಣಮಟ್ಟದ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಲಿಲ್ಲ ಎಂದರು. ಈ ಕುರಿತು ಉತ್ತರಿಸಿದ ಸಚಿವರು, ಹಣ ರಿಕವರಿ ಮಾಡಿ, ಕ್ರಮ ಜರುಗಿಸಿ ಎಂದರು.