ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಬೆಳೆಹಾನಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 14 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 14.35 ಕೋಟಿ ರೂ. ಸೇರಿ ಒಟ್ಟು 28 ಕೋಟಿ ರೂ. ಬೆಳೆಹಾನಿ ಪರಿಹಾರ ಬಿಡುಗಡೆಯಾಗಿದೆ. ಜಿಲ್ಲೆಯ 33,726 ರೈತರ ಖಾತೆಗಳಿಗೆ ಒಂದೆರೆಡು ದಿನದಲ್ಲಿ ಪರಿಹಾರದ ಹಣ ಜಮೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ, ಆಗಸ್ಟ್‌ನಲ್ಲಿ ರಾಜ್ಯದ 27 ಜಿಲ್ಲೆಗಳಲ್ಲಿ ಅತಿಯಾದ ಮಳೆಯಿಂದ 12.11 ಲಕ್ಷ ಹೆಕ್ಟೇರ್ ಬೆಳೆಹಾನಿ ಉಂಟಾಗಿತ್ತು. ಜಿಲ್ಲೆಯಲ್ಲಿ 18,821 ಹೆಕ್ಟೇರ್ ಬೆಳೆಹಾನಿ ಆಗಿರುವ ಕುರಿತು ವರದಿ ನೀಡಲಾಗಿತ್ತು. ವರದಿ ಅನ್ವಯ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಜಿಲ್ಲೆಯ 33,726 ರೈತರಿಗೆ 14 ಕೋಟಿ 68 ಲಕ್ಷ ರೂ. ಜಮೆ ಮಾಡಲಾಗಿದೆ ಎಂದರು.
ಎನ್‌ಡಿಆರ್‌ಎಫ್ ಮಾರ್ಗಸೂಚಿ ಜತೆಗೆ ಮುಖ್ಯಮಂತ್ರಿ ಅವರಿಂದ ಪ್ರತಿ ಹೆಕ್ಟೇರ್‌ಗೆ ತಲಾ 8,500 ರೂ. ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ. ಜಿಲ್ಲೆಯ 33,726 ರೈತರಿಗೆ 14.35 ಕೋಟಿ ರೂ. ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಎರಡೂ ಹಣ ಬಿಡುಗಡೆಯಾಗಿದ್ದು, ಒಂದೆರೆಡು ದಿನದಲ್ಲಿ ಜಮೆ ಆಗುತ್ತದೆ ಎಂದು ಭರವಸೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಬೆಳಗಾವಿ ಡಿಸಿ ಮಹಮ್ಮದ್ ರೋಷನ್, ಜಿಪಂ ಸಿಇಒ ರುಚಿ ಬಿಂದಲ್, ಎಸ್‌ಪಿ ಯಶೋಧಾ ವಂಟಗೋಡಿ, ಇತರರಿದ್ದರು.
ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಮಳೆ ಆಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 8,500 ರೂ., ನೀರಾವರಿ ಬೆಳೆಗಳಿಗೆ ಹೆಕ್ಟೇರ್‌ಗೆ 17,000 ರೂ. ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಕ್ಟೇರ್‌ಗೆ 22,500 ರೂ. ಘೋಷಿಸಲಾಗಿದೆ.
ಜಿಲ್ಲಾಧಿಕಾರಿಯವರು ಜಿಲ್ಲೆಯ ಮೂರೂ ಸಕ್ಕರೆ ಕಾರ್ಖಾನೆಗಳಿಗೆ ತೆರಳಿ ರಿಕವರಿ ಲ್ಯಾಬ್‌ಗಳನ್ನು ಪರಿಶೀಲಿಸಿದ್ದಾರೆ. ತೂಕದಲ್ಲಿ ಮೋಸ ಅಗದಂತೆ ಕ್ರಮ ವಹಿಸಿದ್ದಾರೆ. ಸರ್ಕಾರದಿಂದಲೇ ಶೀಗ್ರದಲ್ಲಿ ರಿಕವರಿ ಲ್ಯಾಬ್ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.