Haveri, Maze, Farmers, Protest,  
ಹಾವೇರಿ

ಮೆಕ್ಕೆಜೋಳ ಬಿಕ್ಕಟ್ಟು ಇತ್ಯರ್ಥಕ್ಕೆ ಬಿಜೆಪಿಯೂ ಕೈಜೋಡಿಸಲಿ; ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಮೆಕ್ಕೆಜೋಳ ಖರೀದಿ ಕೇಂದ್ರ ಬಿಕ್ಕಟ್ಟು ಪರಿಹಾರಕ್ಕೆ ರಾಜ್ಯ ಸರ್ಕಾರ ಸಿದ್ಧ
  • ಬಿಜೆಪಿಯ ಕೇಂದ್ರ ಸಚಿವರು, ಸಂಸದರೂ ಕೈಜೋಡಿಸಲಿ
  • ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಕರೆ
ಹಾವೇರಿ: ಕೇಂದ್ರ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಕುರಿತು ಸಮಯಕ್ಕೆ ಸರಿಯಾಗಿ ಮಾರ್ಗಸೂಚಿ ಹೊರಡಿಸದ ಪರಿಣಾಮ ರಾಜ್ಯ ಸೇರಿ ದೇಶದ ಹಲವೆಡೆ ಇದರ ಪರಿಣಾಮ ರೈತರ ಮೇಲಾಗಿದೆ. ಈ ಬಿಕ್ಕಟ್ಟು ಪರಿಹಾರಕ್ಕೆ ರಾಜ್ಯ ಸರ್ಕಾರ ಸಿದ್ಧವಿದ್ದು, ಬಿಜೆಪಿಯ ಕೇಂದ್ರ ಸಚಿವರು, ಸಂಸದರೂ ಕೈಜೋಡಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಕರೆ ನೀಡಿದರು.
ಇಲ್ಲಿನ ದೇವಗಿರಿಯ ಜಿಲ್ಲಾಡಳಿತ ಭವನದ ಎದುರು ಮೆಕ್ಕೆಜೋಳಕ್ಕೆ 3 ಸಾವಿರ ರೂ. ದರ ನಿಗದಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆರಂಭಿಸಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಸಚಿವರು ರೈತರ ಅಹವಾಲು ಆಲಿಸಿದ ನಂತರ ಮಾತನಾಡಿದರು.
ಮೆಕ್ಕೆಜೋಳ ಸೇರಿದಂತೆ ಯಾವುದೇ ಉತ್ಪನ್ನದ ಬೆಂಬಲ ಬೆಲೆ (ಎಂಎಸ್‌ಪಿ), ಖರೀದಿ ಕೇಂದ್ರ ಆರಂಭಿಸುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿದೆ. ಈ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿ ಹೊರಡಿಸದ ಹಿನ್ನೆಲೆಯಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರದ ಆದೇಶವನ್ನು ಎಥನಾಲ್ ಕಾರ್ಖಾನೆಗಳು ಪಾಲಿಸದೇ ಕಡಿಮೆ ದರದಲ್ಲಿ ರೈತರಿಂದ ಮೆಕ್ಕೆಜೋಳ ಖರೀದಿಸಿವೆ. ಹಾಗಾಗಿ, ಅಂತಹ ಕಾರ್ಖಾನೆಗಳಿಂದ ಎಥೆನಾಲ್ ಖರೀದಿಸದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸರ್ಕಾರದಿಂದಲೇ ಪಂಪ್‌ಸೆಟ್‌ಗಳಿಗೆ ಕಂಬ, ತಂತಿ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮೆಕ್ಕೆಜೋಳಕ್ಕೆ ಎಂಎಸ್‌ಪಿ ದರ 2,400 ರೂ. ಜತೆಗೆ ರಾಜ್ಯದ 600 ರೂ. ಸೇರಿಸಿ 3,000 ದರ ರೂ. ನಿಗದಿಪಡಿಸಿ, ಕೂಡಲೇ ಖರೀದಿ ಕೇಂದ್ರ ಆರಂಭಿಸುವವರೆಗೆ ನಾವು ಧರಣಿ ನಿಲ್ಲಿಸಲ್ಲ. ಧರಣಿ ಆರಂಭಿಸಿ ನಾಲ್ಕು ದಿನವಾರೂ ಯಾರೂ ಬಂದಿರಲಿಲ್ಲ. ಸಿಎಂ ಕುರ್ಚಿ ಗದ್ದಲದಾಗ ಕೂಸು ಬಡವಾದಂತೆ ಆಗಿದೆ ನಮ್ಮ ಪರಿಸ್ಥಿತಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುವುದು ಬೇಡ. ಮೊದಲು ರೈತರ ಸಮಸ್ಯೆ ಬಗೆಹರಿಸಿ ಎಂದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಒಂದು ಅಥವಾ ಎರಡು ದಿನದಲ್ಲಿ ಎನ್‌ಡಿಆರ್‌ಎಫ್‌ನ 8,500 ರೂ. ಬೆಳೆಹಾನಿ ಪರಿಹಾರ ಜತೆಗೆ ರಾಜ್ಯ ಸರ್ಕಾರದ ಹೆಚ್ಚುವರಿ 8,500 ರೂ. ಪರಿಹಾರದ ಮೊತ್ತೆ ರೈತರ ಖಾತೆಗಳಿಗೆ ಜಮೆ ಆಗಲಿದೆ ಎಂದರು.
ತ್ವರಿತವಾಗಿ ಬಗೆಹರಿಸಿ
ಸರ್ಕಾರಗಳ ರೈತ ವಿರೋಧಿ ಧೋರಣೆಗಳಿಂದ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿವೆ. ಮತ್ತೆ ಮಳೆ ಶುರುವಾದರೆ ಮೆಕ್ಕೆಜೋಳ ನೀರು ಪಾಲಾಗುತ್ತದೆ. ಆಗ ಆತ್ಮಹತ್ಯೆ ಒಂದೇ ದಾರಿ ಉಳಿಯುತ್ತದೆ. ಹಾಗಾಗಿ, ಕೂಡಲೇ ಕ್ರಮ ತೆಗೆದುಕೊಳ್ಳಿ. ರೈತರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಬೊಟ್ಟು ಮಾಡುತ್ತ ಕಾಲಹರಣ ಮಾಡುವುದು ಬೇಡ. ಇದೇ ರೈತರ ವೇದಿಕೆಗೆ ಬಿಜೆಪಿಯ ಸಂಸದರನ್ನೂ ಕರೆಸುತ್ತೇವೆ. ಕಾಂಗ್ರೆಸ್‌ನ ಸಚಿವರು, ಶಾಸಕರೂ ಬನ್ನಿ. ನೇರವಾಗಿ ಇರುವ ವಿಚಾರ ತಿಳಿಸಿ, ರೈತರ ಪರವಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಿ. 3 ಸಾವಿರ ನಿಗದಿಪಡಿಸಿ ಇಲ್ಲವೇ ಎಲ್ಲಿಯಾದರೂ ಮಾರಾಟ ಮಾಡಿ. ಒಂದು ಕ್ವಿಂಟಲ್‌ಗೆ ಇಂತಿಷ್ಟು ಸಹಾಯಧನ ಎಂದು ಘೋಷಿಸಿ. ತ್ವರಿತವಾಗಿ ಸಮಸ್ಯೆ ಬಗೆಹರಿಸಿ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.
ಈ ವರ್ಷ ಬೆಳೆ ಹೆಚ್ಚಾಗಿದೆ
ಪ್ರತಿ ವರ್ಷಕ್ಕಿಂತ ಈ ವರ್ಷ ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಿದೆ. ರೈತರಿಗೆ ವೆಚ್ಚವೂ ಹೆಚ್ಚಾದ ಪರಿಣಾಮ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆದಿದೆ. ಕರ್ನಾಟಕ, ಮಹಾರಾಷ್ಟ್ರ ಸಮ ಪ್ರಮಾಣದಲ್ಲಿದೆ. ಉತ್ಪಾದನೆ ಹೆಚ್ಚಾದ ಪರಿಣಾಮ ಬೆಲೆ ಕುಸಿತದ ಆತಂಕದಿಂದ ಹಲವರು ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಕೂಡಲೇ ದರ ನಿಗದಿಪಡಿಸಿ ಎಂದು ಅಕ್ಟೋಬರ್‌ನಲ್ಲೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರದಿಂದ ನವೆಂಬರ್‌ನಲ್ಲಿ ಉತ್ತರ ಬಂದಿದೆ. ಭತ್ತ, ಕಬ್ಬಿಗಿಂತ ಮೆಕ್ಕೆಜೋಳದಿಂದ ಎಥೆನಾಲ ಧಾರಣೆ ಹೆಚ್ಚಾಗಿ ಬರುತ್ತದೆ. ಹಾಗಾಗಿ, ಮೆಕ್ಕೆಜೋಳ ಖರೀದಿಸು ಒತ್ತಡ ಹೇರಲಾಗುತ್ತಿದೆ. ಕೆಎಂಎಫ್, ಕೋಳಿ ಫಾರ್ಮ್, ಎಲ್ಲೆಲ್ಲಿ ಸಾಧ್ಯ ಅಲ್ಲಿ ಮಾರಾಟ ಮಾಡಲು ಅಗತ್ಯ ಕ್ರಮ ಕೈಗೊಲ್ಳಲಾಗುತ್ತಿದೆ. ಸ್ವಲ್ಪ ಸಮಯಾವಕಾಶ ನೀಡಿ ಎಂದು ಸಚಿವ ಶಿವಾನಂದ ಪಾಟೀಲರು ಕೋರಿದರು.

ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಬರದಿದ್ದರೆ ಬದುಕು ಕಷ್ಟವಾಗುತ್ತದೆ. ನಾವೂ ಕೇಂದ್ರಕ್ಕೆ ಸಹಕಾರ ಕೊಡುತ್ತೇವೆ. ಸದ್ಯಕ್ಕೆ ಎಥೆನಾಲ್ ಖರೀದಿಸದಂತೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆದು, ಮಾರ್ಗಸೂಚಿ ಹೊರಡಿಸಬೇಕು. ಮೆಕ್ಕೆಜೋಳ ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಕ್ಯಾಬಿನೇಟ್‌ನಲ್ಲಿಯೂ ಚರ್ಚಿಸಲಾಗುವುದು. ಬಿಜೆಪಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ದಿನಾಂಕ ನಿಗದಿಪಡಿಸಲಿ. ರಾಜ್ಯದ ನಿಯೋಗದೊಂದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧವಿದೆ.