ಹಾವೇರಿ: ಜಿಲ್ಲೆಗೆ ಶುಕ್ರವಾರ ಮುಂಗಾರು ಮಳೆ ಪ್ರವೇಶಿಸಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಶಹರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ಬಿಸಿಲು, ಆಗಾಗ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ಮಧ್ಯಾಹ್ನ 3 ಗಂಟೆ ನಂತರ ಭಾರೀ ಮೋಡಗಳು ಕಂಡುಬಂದವು. ಸಂಜೆ ನಂತರ ಮಳೆ ಶುರುವಾಯಿತು. ಸುಮಾರು ಗಂಟೆಗಳ ಕಾಲ ಹದವಾದ ಮಳೆ ಸುರಿಯಿತು.
ಎರಡು ವಾರಗಳಿಂದ ರೈತರು ಬೀಜ, ಗೊಬ್ಬರ, ಡೀಸೆಲ್ ಸಂಗ್ರಹಿಸಿಕೊಂಡು, ಬಿತ್ತನೆ ಮಾಡಿದ್ದರು. ಸೋಯಾಬೀನ್, ಮೆಕ್ಕೆಜೋಳ, ಹತ್ತಿ, ಇತರ ಬೀಜಗಳನ್ನು ಬಿತ್ತನೆ ಮಾಡಿದ್ದರು. ಮಳೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ರೈತರ ಮೊರೆ ಆಲಿಸಿದ ಮಳೆರಾಯ ಶುಕ್ರವಾರ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾನೆ. ರೈತರ ಖುಷಿಗೆ ಕಾರಣವಾಗಿದ್ದಾನೆ.
ಹಾನಗಲ್ಲ ಪಟ್ಟಣ, ಸುತ್ತಮುತ್ತ ಗುಡುಗು ಮಿಶ್ರಿತ ಮಳೆ ಆಗಿದೆ. ಶಿಗ್ಗಾಂವಿ, ಬಂಕಾಪುರ, ರಾಣೆಬೆನ್ನೂರ, ಹಾವೇರಿ ತಾಲೂಕಿನ ಗುತ್ತಲ, ಅಗಡಿ, ಹೊಸರಿತ್ತಿ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.