ಹಾವೇರಿ: ಇಲ್ಲಿನ ಮಂಜುನಾಥ ನಗರ ಎಲ್‌ಐಸಿ ಕಾಲನಿಯಲ್ಲಿ ಶ್ರೀ ರಾಮಾಂಜನೇಯ ಹಾಗೂ ವಿನಾಯಕ ದೇವರ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಮಾ.13ರಿಂದ 15ರವರೆಗೆ ವಿವಿಧ ಮಠಾಧೀಶರು ಹಾಗೂ ಭಕ್ತರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿಯ ಹರೀಶ ಇಂಗಳಗೊಂದಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.13ರಂದು ಮಧ್ಯಾಹ್ನ 3 ಗಂಟೆಗೆ ಕುಂಭ ಹೊತ್ತ 101 ಮಹಿಳೆಯರು ಹಾಗೂ ವಿವಿಧ ವಾದ್ಯಗಳೊಂದಿಗೆ ನೂತನ ವಿಗ್ರಹಗಳ ಮೆರವಣಿಗೆ ನಡೆಯಲಿದೆ. ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಲಿದೆ. ಮಾ.14ರಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾದೇವಿ ಹಾಗೂ ಶ್ರೀ ಗಣೇಶ, ಆಂಜನೇಯ ಮೂರ್ತಿಗಳಿಗೆ ಧಾನ್ಯಾಧಿವಾಸ ಕಾರ್ಯಕ್ರಮ ನಡೆಯಲಿದೆ. ಸಂಜೆ ನೂತನ ದೇವಸ್ಥಾನದ ಆಲಯ ಪ್ರವೇಶ, ಗುರು ಗಣೇಶ ಪೂಜೆ, ನವಗ್ರಹ ಸಂಕಲ್ಪ, ವಾಸ್ತು ರಾಕ್ಷೋಜ್ಞ ಹವನ, ಶಯನೋತ್ಸವ ಜರುಗಲಿದೆ ಎಂದರು.
ಮಾ.15ರಂದು ಬೆಳಗ್ಗೆ 10.15ಕ್ಕೆ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದೆ. ಕಲಾತತ್ವ ಹವನ, ಮೂಲ ಮಂತ್ರ ಹವನ, ಶಾಂತಿ ಹವನ, ಪ್ರಾಯಶ್ಚಿತ ಹವನ, ಬಲದೇವತಾ ಹವನ, ಅವಶಿಷ್ಟ ಹವನ, ಪೂರ್ಣಾಹುತಿ, ಬ್ರಹ ಕುಂಭಾಭಿಷೇಕ, ವಿಶೇಷ ಪೂಜೆ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಸೇವೆ, ಸಂಜೆ 6 ಗಂಟೆಗೆ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಭಕ್ತರಾದ ಪ್ರಮೋದ ನವಲೆ, ನಿಂಗಪ್ಪ ಬಾರಕೇರ, ಸಂದೀಪ ಮಶಾಲಜಿ, ಸಂತೋಷ ಮಡಿವಾಳರ, ಇತರರಿದ್ದರು.