Haveri, Manegondu Library, Pustaka Pradhikara,  
ಹಾವೇರಿ

ಓದಿನ ಬೆಳಕು ಬದುಕಿನ ಬೆಳಕಾಗಲಿ; ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಡಿಸಿ ದಾನಮ್ಮನವರ ಸಲಹೆ

ಹಾವೇರಿ: ಓದಿನ ಬೆಳಕು ಬದುಕಿನ ಬೆಳಕಾಗಬೇಕು. ಅಕ್ಷರದ ಅರಿವು ಮೂಡಿದಾಗ ಸಮಾಜದಲ್ಲಿ ಬದಲಾವಣೆ ಬರಲು ಕಾರಣವಾಗುತ್ತದೆ. ಪುಸ್ತಕಗಳೇ ಇದಕ್ಕೆಲ್ಲ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಇತ್ತೀಚೆಗೆ ನಗರದ ಜಾಗೃತಿ ಸಮಿತಿ ಸದಸ್ಯೆ, ಸಂಶೋಧನಾ ವಿದ್ಯಾರ್ಥಿನಿ ಅನಿತಾ ಮಂಜುನಾಥ ನಿವಾಸದಲ್ಲಿ ಆಯೋಜಿಸಿದ್ದ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಳಿಸಿದ ಎರಡು ರೂಪಾಯಿಗಳಲ್ಲಿ ಒಂದನ್ನು ಪುಸ್ತಕದ ಓದಿಗಾಗಿ ತೆಗೆದಿಡು ಎಂಬ ಬಾಬಾಸಾಹೇಬರ ಆಶಯದಂತೆ ಇಂದು ನಗರದಲ್ಲಿ ಮೂರು ಗ್ರಂಥಾಲಯಗಳು ರಚನೆಗೊಳ್ಳುವುದು ಇದಕ್ಕೆ ಪೂರಕವಾಗಿದೆ ಎಂದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಆಗಮಿಸಿ ಐವತ್ತಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದರು. ಮೊಬೈಲ್ ಹಾವಳಿಯಿಂದ ಪುಸ್ತಕದ ಓದು ಕಡಿಮೆಯಾಗಿದೆ ಎಂಬ ಮಾತು ಸುಳ್ಳು. ಇಂದಿನ ತಲೆಮಾರಿನ ಓದಿನ ವಿಧಾನ ಬದಲಾಗಿದೆಂದು ಅರ್ಥೈಸಬೇಕು. ವ್ಯವಧಾನವಿಲ್ಲದ ಜೀವನದ ಓಟದಲ್ಲಿ ನಾವು ಹೊಸ ಹೊಸ ವಿಧಾನಗಳಿಗೆ ಜೋಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ಕರ್ನಾಟಕದಲ್ಲಿ ಮಾರ್ಚ್ 2027ರ ಅಂತ್ಯಕ್ಕೆ ಸುಮಾರು ಒಂದು ಲಕ್ಷ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸುವುದು ಪ್ರಾಧಿಕಾರದ ಗುರಿಯಾಗಿದೆ. ಮನೆಗೊಂದು ಗ್ರಂಥಾಲಯ ಹುಟ್ಟುವುದು ಎಂದರೆ ಪ್ರತಿ ಮನೆಯಲ್ಲಿ ಅರಿವಿನ ದೀಪ ಹಚ್ಚಿದಂತೆ. ಇದರಿಂದಾಗಿ ಮೂರು ಕೋಟಿ ಮನಸ್ಸುಗಳಲ್ಲಿ ಓದಿನ ಅರಿವು ಮೂಡಿಸಿದಂತೆ ಎಂದರು.
ಅನಿತಾ ಮಂಜುನಾಥ ದಂಪತಿಗೆ ಸಮಿತಿಯಿಂದ ಐವತ್ತು ಪುಸ್ತಕಗಳು ಮತ್ತು ಅಭಿನಂಧನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಡಾ.ವಿ.ಕೃ.ಗೋಕಾಕ ಟ್ರಸ್ಟ್ ಅಧ್ಯಕ್ಷ ಡಾ.ಸತೀಶ ಕುಲಕರ್ಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಡಾ.ಅರವಿಂದ ಮೂಲಿಮನಿ, ದಾಕ್ಷಾಯಿಣಿ ಗಾಣಗೇರ, ಅಮೃತಾ ಶೀಲವಂತರ, ರಾಜೇಶ್ವರಿ ಬಿಷ್ಟನಗೌಡರ, ಜಾಗೃತಿ ಸಮಿತಿಯ ಸದಸ್ಯರಾದ ಸಿ.ಎಸ್.ಮರಳಿಹಳ್ಳಿ. ಡಾ.ಲಕ್ಷ್ಮೀಕಾಂತ ಮಿರಜಕರ, ಸೊಮನಾಠ ಡಿ., ಸೋಮಣ್ಣ ಡಂಬರಮತ್ತೂರ, ಇತರರು ಉಪಸ್ಥಿತರಿದ್ದರು.
ಲಿಖಿತಾ ಮತ್ತು ಜೀವಿಕಾ ಪ್ರಾರ್ಥಿಸಿದರು. ಸಮಿತಿ ಸದಸ್ಯ ಎಸ್.ಆರ್.ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ನಿರೂಪಿಸಿದರು. ಡಾ.ಗೀತಾ ಸುತ್ತಕೋಟಿ ವಂದಿಸಿದರು.