Haveri, Mahila Congress, Protest, For Women, Reservation Bill,  
ಹಾವೇರಿ

ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಆಗ್ರಹ; ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರಿಂದ ಪ್ರತಿಭಟನೆ

ಹಾವೇರಿ: ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲು ಆಗ್ರಹಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಭಾನುವಾರ ಪ್ರತಿಭಟಿಸಲಾಯಿತು.
ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾ ಪಾಟೀಲ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತ ಇರದಿದ್ದರೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಹಾಗೂ ಮಹಿಳಾ ಮೀಸಲಾತಿ ವಿಧೇಯಕವನ್ನು ಪಾಸ್ ಮಾಡಲು ಹೊರಟು ಸೋಲನ್ನು ಅನುಭವಿಸಿದೆ. ಬಿಜೆಪಿಯವರು ಮಹಿಳಾ ವಿರೋಧಿಯಾಗಿದ್ದಾರೆ. ಕಾಂಗ್ರೆಸ್‌ನವರು ಹಾಗೂ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಬೆಂಬಲ ಸೂಚಿಸಲಿಲ್ಲ ಎಂದು ಸುಖಾಸುಮ್ಮನೇ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮಹಿಳೆಯರ ಮತ ಸೆಳೆಯಲು ಈ ರೀತಿಯ ಹುನ್ನಾರ ನಡೆಸಿದ್ದಾರೆ. ಮಹಿಳಾ ಮೀಸಲು ಅಂಗೀಕಾರಕ್ಕೆ ಕಾಂಗ್ರೆಸ್‌ನವರು ಸಹಮತ ವ್ಯಕ್ತಪಡಿಸುತ್ತಿಲ್ಲ ಎಂದು ಜನಸಾಮಾನ್ಯರನ್ನು ತಪ್ಪು ದಾರಿಗೆ ಕರೆದೊಯ್ಯುವ ಕುತಂತ್ರ ಕೇಂದ್ರ ಸರ್ಕಾರ ಮಾಡುತ್ತಿದೆ. ಮಾಜಿ ಪ್ರಧಾನಿ ರಾಜೀವಗಾಂಧೀ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದರು. ಆದರೆ, ಸ್ಪಷ್ಟ ಬಹುಮತ ಇರದ ಕಾರಣ ಈ ಮಸೂದೆ ನನೆಗುದಿಗೆ ಬಿದ್ದಿತ್ತು. ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ಪರವಾಗಿದ್ದು, ಶೀಘ್ರವೇ ಶೇ.33ರಷ್ಟು ಮೀಸಲು ಮಸೂದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಂತಕ್ಕ ಶಿರೂರ, ವಸಂತಾ ಬಾಗೂರ, ಗೀತಾ ಪೂಜಾರ, ಗೀತಾ ಪ್ರಕಾಶ, ಮಮತಾ ಜಾಬೀನ್, ಶಿಲ್ಪಾ ಬಡೆಮ್ಮನವರ, ರತ್ನಾ ಶಿಡಗನಾಳ, ಪಾರ್ವತಿ ಹರಕುಣಿ, ರಾಧಾ ಸವಣೂರ, ಅನಸೂಯಾ ಬಳಗೇರ, ಜಯಶ್ರೀ ಶಿವಪುರ, ವೈಶಾಲಿ ಪೂಜಾರ, ಸಂಜನಾ ಕಲಾಲ, ಶಶಿಕಲಾ ಆರಿಕಟ್ಟಿ, ಶೋಭಾ ಭಜಂತ್ರಿ, ಬಸಮ್ಮ ಹಳ್ಳಿಕೇರಿ, ಇತರರಿದ್ದರು.