lokayukta trap 
ಹಾವೇರಿ

ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ; ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಸವಿತಾ ಬೆಳ್ಳಿಗಟ್ಟಿ ಬಂಧನ

ಹಾವೇರಿ: ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸರ್ಟಿಫಿಕೇಟ್ (ಬಿಎಂಡಬ್ಲೂೃ) ನೀಡಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿಯೊಬ್ಬರು ವೈದ್ಯರೊಬ್ಬರ ಸಹೋದರರಿಂದ 6,000 ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿ ಬಂಧಿಸಿದ್ದಾರೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಡಾಟಾ ಎಂಟ್ರಿ ಆಪರೇಟರ್ ಸವಿತಾ ಬೆಳ್ಳಿಗಟ್ಟಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಆರೋಪಿ.
ನಗರದ ನಿವಾಸಿ ನವೀನ ಎ.ಎಚ್. ಎಂಬುವರ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನವೀನ ಅವರ ಸಹೋದರ ಡಾ.ನಿಖಿಲ ಎ.ಎಚ್. ಹಾವೇರಿ ನಗರದಲ್ಲಿ ನಡೆಸುತ್ತಿರುವ ಕ್ಲಿನಿಕ್‌ಗೆ ಸಂಬಂಧಿಸಿದಂತೆ ಬಿಎಂಡಬ್ಲೂೃ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಬಿಎಂಡಬ್ಲೂೃ ಪ್ರಮಾಣ ಪತ್ರ ನೀಡಲು ಸವಿತಾ 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ 6,000 ರೂ.ಗೆ ಒಪ್ಪಿಕೊಂಡಿದ್ದರು. ಮಂಗಳವಾರ ದೂರುದಾರರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಲ್ಲಿ ಸವಿತಾ 6 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಟ್ರಾೃಪ್ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಸಿ.ಮಧುಸೂದನ ನೇತೃತ್ವದಲ್ಲಿ ದಾಳಿ ನಡೆದಿದೆ. ತನಿಖಾಧಿಕಾರಿ ಎಸ್.ಎ.ಪಾಟೀಲ, ಪೊಲೀಸ್ ನಿರೀಕ್ಷಕ ದಾದಾವಲಿ ಕೆ.ಎಚ್., ಸಿಬ್ಬಂದಿ ಸಿ.ಎಂ.ಬಾರ್ಕಿ, ಎಂ.ಕೆ.ನದಾಫ, ಟಿ.ಇ.ತಿರುಮಲೆ, ಎಸ್.ಸಿ.ಮುಗದೂರ, ಬಿ.ಎಂ.ಕರ್ಜಗಿ, ಎಂ.ಕೆ.ಲಕ್ಷ್ಮೇಶ್ವರ, ಎಸ್.ಎನ್.ಕಡಕೋಳ, ಬಿ.ಎಸ್.ಸಂಕಣ್ಣನವರ, ಎಂ.ಎಸ್.ಕೊಂಬಳಿ, ಎ.ಜಿ.ಶೆಟ್ಟರ, ಎಸ್.ಎಸ್.ಲಿಂಗಮ್ಮನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.