Haveri, Lokayukta Police, Raid, At Haveri CMC, Office,
ಹಾವೇರಿ: ಅಕ್ರಮ, ಅವ್ಯವಹಾರದ ಆರೋಪದ ಸುಳಿಯಲ್ಲಿ ಸಿಲುಕಿರುವ ಹಾವೇರಿ ನಗರಸಭೆಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ. ನಗರಸಭೆ ವಿರುದ್ಧ ಹಲವು ದೂರುಗಳು ಬಂದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ನಗರಸಭೆ ಕಾರ್ಯಾಲಯದ ಮೇಲೆ ದಾಳಿ ನಡೆಸಿ, ಹಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಕುಡಿಯುವ ನೀರು ಪೂರೈಕೆ, ಚರಂಡಿ, ಒಳಚರಂಡಿ, ಆಸ್ತಿ ನೋಂದಣಿ, ಇ-ಸ್ವತ್ತು, ತೆರಿಗೆ ಪಾವತಿ, ವಾಣಿಜ್ಯ ಮಳಿಗೆಗಳ ನಿರ್ಮಾಣ, ಬಾಡಿಗೆಯಲ್ಲಿ ಅವ್ಯವಹಾರದ ಆರೋಪ ಸೇರಿದಂತೆ ಅನೇಕ ಆರೋಪಗಳು ನಗರಸಭೆಯ ಮೇಲೆ ಆಗಾಗ ಕೇಳಿ ಬರುತ್ತಲಿವೆ. ಸದ್ಯ ನಗರಸಭೆಯಲ್ಲಿ ಜನಪ್ರತಿನಿಧಿಗಳ ಅವಧಿ ಮುಕ್ತಾಯಗೊಂಡಿದ್ದು, ಅಧಿಕಾರಿಗಳದ್ದೇ ಕಾರುಬಾರು ಎನ್ನುವಂತಾಗಿದೆ. ಜಿಲ್ಲಾಧಿಕಾರಿಯವರೇ ಆಡಳಿತಾಧಿಕಾರಿಯಾಗಿದ್ದು, ಅವರ ನಿಯಂತ್ರಣಕ್ಕೂ ಇಲ್ಲಿನ ಸಿಬ್ಬಂದಿ ಬಾರದಂತಾಗಿದ್ದಾರೆ ಎಂಬ ಆರೋಪಗಳಿವೆ. ಹಾವೇರಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸದೇ ನಿರ್ಲಕ್ಷೃ ತೋರುತ್ತಿದ್ದಾರೆ ಎಂಬ ದೂರುಗಳೂ ಇವೆ. ಈ ದೂರುಗಳು ಕರ್ನಾಟಕ ಲೋಕಾಯುಕ್ತ ಮುಖ್ಯ ಕಚೇರಿಗೂ ತಲುಪಿದ್ದವು. ಈ ಹಿನ್ನೆಲೆಯಲ್ಲಿ, ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತರು ಸಮಗ್ರ ವರದಿ ನೀಡುವಂತೆ ಸೂಚಿಸಿದ್ದರು. ಹಾಗಾಗಿ, ಸ್ಥಳೀಯ ಲೋಕಾಯುಕ್ತ ಪೊಲೀಸರು, ದಿಡೀರ್ ದಾಳಿ ನಡೆಸಿ, ನಗರಸಭೆಯ ಜನ್ಮ ಜಾಲಾಡಿದ್ದಾರೆ.
ಏ.16ರಂದು ನಗರಸಭೆ ಕಾರ್ಯಾಲಯದ ಮೇಲೆ ಹಾವೇರಿ ಲೋಕಾಯುಕ್ತ ಡಿವೈಎಸ್‌ಪಿ ಮಧುಸೂದನ ಸಿ. ನೇತೃತ್ವದಲ್ಲಿ ಹಾವೇರಿ ಹಾಗೂ ದಾವಣಗೆರೆ ಲೋಕಾಯುಕ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳ ಕರ್ತವ್ಯಲೋಪ, ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದಿರುವುದು, ಕಾಮಗಾರಿಗಳಲ್ಲಿ ಅಕ್ರಮ, ಅವ್ಯವಹಾರ, ಸೇರಿದಂತೆ ಹಲವು ನ್ಯೂನ್ಯತೆಗಳ ದಿಗ್ದರ್ಶನವಾಗಿದೆ. ನಗರಸಭೆಯ ಎಲ್ಲ ಕೊಠಡಿಗಳು, ದಸ್ತಾವೇಜುಗಳನ್ನು ಪರಿಶೀಲನೆ ನಡೆಸಿದ ಲೋಕಾಯುಕ್ತರು, ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾಗಿ ಲೋಕಾಯುಕ್ತ ಮೂಲಗಳು ತಿಳಿಸಿವೆ.
ಹಾವೇರಿ ಸಮೀಪ ತುಂಗಭದ್ರಾ, ವರದಾ ಎರಡು ನದಿಗಳು ಇದ್ದರೂ ಇಲ್ಲಿನ ಜನರಿಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ನಗರಸಭೆಗೆ ಆಗಿಲ್ಲ. 15, 20 ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದು, ಅದೂ ಅಶುದ್ದವಾಗಿರುತ್ತದೆ. ಒಳಚರಂಡಿ ವ್ಯವಸ್ಥೆಯೇ ಇಲ್ಲ. ಚರಂಡಿಗಳಲ್ಲಿ ನೀರು ಹರಿಯಲ್ಲ. ಸ್ವಚ್ಛತೆಗೆ ಇಲ್ಲಿ ಜಾಗವೇ ಇಲ್ಲ ಎಂಬಂತಾಗಿದೆ. ಇದರಿಂದ ಇಲ್ಲಿನ ಜನ ಸಾಂಕ್ರಾಮಿಕ ಕಾಯಿಲೆಗಳಿಂದ ನರಳುತ್ತಿದ್ದಾರೆ. ಲೋಕಾಯುಕ್ತ ಪೊಲೀಸರ ದಾಳಿಯಿಂದಾದರೂ ಈ ಸಮಸ್ಯೆಗಳಿಗೆ ಇನ್ನಾದರೂ ಶಾಶ್ವತ ಪರಿಹಾರ, ಮುಕ್ತಿ ಸಿಗಲಿ ಎಂಬುದು ಸ್ಥಳೀಯ ನಾಗರಿಕರ ಆಶಯವಾಗಿದೆ.
ಖಾಸಗಿ ವ್ಯಕ್ತಿಗಳು ಪತ್ತೆ, ಲಂಚ ವಸೂಲಿ
ಹಾವೇರಿ ನಗರಸಭೆ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ವೇಳೆ ಅನಧಿಕೃತವಾಗಿ ಮುನ್ನಾ ಮರ್ದನಸಾಬ ಹುಬ್ಬಳ್ಳಿ, ಶೋಯೆಬ್ ಚೀನಿವಾಲ ಹಾಗೂ ದಿನೇಶ ಹುಬ್ಬಳ್ಳಿ ಎಂಬ ಹೆಸರಿನ ಮೂವರು ಕೆಲಸ ಮಾಡುತ್ತಿದ್ದರು. ಕಚೇರಿ ಕೆಲಸಕ್ಕೆಂದು ಬರುವ ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಪತ್ತೆ ಹಚ್ಚಿದ್ದಾರೆ. ಮುನ್ನಾ ಹಾಗೂ ದಿನೇಶ ಇಬ್ಬರೂ, ತೆರಿಗೆ ಹಣ ಪಾವತಿಸಲು ಬರುವ ಜನರ ಅರ್ಜಿ ಬರೆದುಕೊಟ್ಟು ತಲಾ 50 ರೂ. ವಸೂಲಿ ಮಾಡುತ್ತಿದ್ದರು. ಶೋಯೇಬ್ ಚೀನಿವಾಲ ಜನನ, ಮರಣ ದಾಖಲಾತಿ ಕೊಠಡಿಯಲ್ಲಿ ಹಣ ಸಂಗ್ರಹಿಸುತ್ತಿದ್ದ. ಮೂವರೂ ತಮ್ಮ ಬಳಿ ಹಣದೊಂದಿಗೆ ಲೋಕಾ ಬಲೆಗೆ ಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಹಾವೇರಿ ನಗರಸಭೆಯ ಬಗ್ಗೆ ಲೋಕಾಯುಕ್ತ ಬೆಂಗಳೂರು ಕೇಂದ್ರ ಕಚೇರಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ದಾಳಿ ನಡೆಸಿ ಹಲವು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ದಾಳಿ ವೇಳೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಯ ಕರ್ತವ್ಯಲೋಪ ಸೇರಿದಂತೆ ಅನೇಕ ಸಮಸ್ಯೆಗಳು ಪತ್ತೆಯಾಗಿವೆ. ಶೀಘ್ರದಲ್ಲೇ ಸಮಗ್ರ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು.