Haveri, Kuruba Samaj, Meeting, Kanakadasa Statue, 
ಹಾವೇರಿ

ತಿರುಪತಿ ಮಾದರಿ ಕನಕದಾಸರ ಪ್ರತಿಮೆ ಸ್ಥಾಪನೆ; ಕುರುಬ ಸಮಾಜದ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾಹಿತಿ

ಹಾವೇರಿ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಪುಣ್ಯಕ್ಷೇತ್ರ ತಿರುಪತಿಯಲ್ಲಿ ಇತ್ತೀಚೆಗೆ ಭಕ್ತಶ್ರೇಷ್ಠ ಕನಕದಾಸರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅದೇ ಮಾದರಿಯಲ್ಲಿ ಹಾವೇರಿ ನಗರದ ಕಾಗಿನೆಲೆ ವೃತ್ತದಲ್ಲಿ ಕನಕದಾಸರ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕುರುಬ ಸಮುದಾಯದ ಮುಖಂಡ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕುರುಬ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ಭಕ್ತಿಯ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದ ಕನಕದಾಸರನ್ನು, ಇಡೀ ದೇಶವೇ ಕೊಂಡಾಡುತ್ತದೆ. ಕನಕದಾಸರು ಹುಟ್ಟಿ ಬೆಳೆದ ಹಾವೇರಿ ಜಿಲ್ಲೆಯಲ್ಲಿಯೂ ಅವರ ಹೆಸರನ್ನು ಮತ್ತಷ್ಟು ಅಜರಾಮರವಾಗಿಸಬೇಕಿದೆ. ಹಲವು ಕಡೆಗಳಲ್ಲಿ ಈಗಾಗಲೇ ಅವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೂ ಮೂರ್ತಿ ಬೇಕೆಂಬ ಕೂಗು ಈಗ ನನಸಾಗುತ್ತಿದೆ ಎಂದರು.
ಕಾಗಿನೆಲೆ ವೃತ್ತ ಕಿರಿದಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿರುವ ಕಾರಣ ಇಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಮಧ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಕಷ್ಟವಾಗುತ್ತದೆ. ಹೀಗಾಗಿ, ಕನಕ ಕುರಿ ಮತ್ತು ಉಣ್ಣೆ ನೇಕಾರರ ಸಹಕಾರಿ ಸಂಘಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಮೂರ್ತಿ ಇರಿಸಲಾಗುವುದು. ಮೂರ್ತಿ ಸಿದ್ಧಪಡಿಸಲು 10 ಲಕ್ಷ ರೂ. ಖರ್ಚಾಗಲಿದೆ. ವೃತ್ತದ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಕಾರವು 25 ಲಕ್ಷ ರೂ.ನೀಡಿದೆ. ಉಳಿದ ಕೆಲಸಗಳಿಗೆ 10ರಿಂದ 15 ಲಕ್ಷ ರೂ. ಬೇಕಾಗಬಹುದು. ನಾನು ವೈಯಕ್ತಿಕವಾಗಿ 1 ಲಕ್ಷ ರೂ. ಕೊಡುತ್ತೇನೆ. ಎಲ್ಲರೂ ಕೈಲಾದಷ್ಟು ದೇಣಿಗೆ ನೀಡಿ, ಮೂರ್ತಿ ಪ್ರತಿಷ್ಠಾಪಿಸೋಣ ಎಂದು ಕರೆ ನೀಡಿದರು.
ಹಾವೇರಿ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಮಾತನಾಡಿ, ಕನಕದಾಸರ ಮೂರ್ತಿ ಪ್ರತಿಷ್ಠಾಪಿಸುವ ಅವಕಾಶ ಈಗ ಬಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಕಾಗಿನೆಲೆ ಗುರುಪೀಠದಲ್ಲಿ ಈ ಬಾರಿ ಕನಕ ಜಯಂತಿ ಆಚರಿಸುವ ಜವಾಬ್ದಾರಿಯನ್ನು ಹಾವೇರಿ ತಾಲೂಕಿಗೆ ವಹಿಸಲಾಗಿದೆ. ಕಳೆದ ಬಾರಿ ರಾಣೆಬೆನ್ನೂರ ತಾಲೂಕಿನವರು ಅದ್ಧೂರಿಯಾಗಿ ಆಚರಿಸಿದರು. ಈ ಬಾರಿ ನಾವೆಲ್ಲರೂ ಯಶಸ್ವಿಗೊಳಿಸೋಣ ಎಂದರು.
ಸಭೆಯಲ್ಲಿ ಕುರುಬ ಸಮಾಜದ ಪ್ರಮುಖರಾದ ಮಹದೇವಗೌಡ ಗಾಜೀಗೌಡ್ರ, ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಆನ್ವೇರಿ, ಅಶೋಕ ಬಣಕಾರ, ಹನುಮಂತಗೌಡ್ರ ಗಾಜೀಗೌಡ್ರ, ಬಸಣ್ಣ ಕಂಬಳಿ, ಅಶೋಕ ಮುದಕಣ್ಣನವರ, ವಿಜಯಕುಮಾರ ಮುದಕಣ್ಣನವರ, ಬಸವರಾಜ ಕೋಟಿ ಹಾಗೂ ತಾಲೂಕಾ ಅಧ್ಯಕ್ಷ ವಿರುಪಾಕ್ಷ ಹುಲ್ಲೂರ, ನಿಂಗಪ್ಪ ತುಕ್ಕಣ್ಣನವರ, ಇತರರಿದ್ದರು.