haveri, KLE, Rajeshwari, College,
ರಾಣೆಬೆನ್ನೂರ: ಇಂದಿನ ದಿನಗಳಲ್ಲಿ ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತು ಬದಲಿಗೆ ಉದ್ಯೋಗಂ ಸ್ತ್ರೀ ಲಕ್ಷಣಂ ಎಂಬ ಸ್ಥಿತಿಗೆ ಬಂದಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ.ವೆಂಕಟೇಶ ಕೆ. ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ 2023-24ರಿಂದ 2025-26ನೇ ಸಾಲಿನ ಬಿ.ಎ ಹಾಗೂ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಅಪಾರವಾಗಿದ್ದು, ವಿದ್ಯಾರ್ಥಿನಿಯರು ಹೆಚ್ಚಿನ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಕಠಿಣ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುವ ಮನೋಬಲವನ್ನು ಬೆಳೆಸಿಕೊಳ್ಳಬೇಕು ಎಂದರು.
ಕೆ.ಎಲ್.ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಪಿ.ಲಿಂಗನಗೌಡ್ರ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನಿಂದ ನಡೆದುಕೊಂಡರೆ ಉನ್ನತ ಸ್ಥಾನಗಳನ್ನು ಅಲಂಕರಿಸಬಹುದು ಮತ್ತು ಸಮಾಜದ ಆಧಾರ ಸ್ತಂಭಗಳಾಗಬೇಕು ಎಂದರು.
ಸಮಾರಂಭದಲ್ಲಿ ವಿದ್ಯಾರ್ಥಿನಿಯರಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಸಂಸ್ಥೆಯ ಸದಸ್ಯ ವೀರಣ್ಣ ಅಂಗಡಿ, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ನಾರಾಯಣ ನಾಯಕ, ಛಾಯಾ, ಪೃಥ್ವಿ, ಕುಸುಮ, ಪ್ರೊ.ಸುಜಾತ ಹುಲ್ಲೂರ, ಪ್ರೊ.ಗಣೇಶ ಅಂಗಡಿ, ಕರೀಷ್ಮಾ, ವೈಷ್ಣವಿ, ಸ್ಪೂರ್ತಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ನಾಗರಾಜ ಗವಿಯಪ್ಪನವರ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.